ಮೊದಲ ಟ್ವೆಂಟಿ-20: ಭಾರತದ ವಿರುದ್ಧ ಬಾಂಗ್ಲಾಕ್ಕೆ ಭರ್ಜರಿ ಜಯ
ಹೊಸದಿಲ್ಲಿ, ನ.3: ಇಲ್ಲಿ ನಡೆದ ಮೊದಲ ಟ್ವಂಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ತಂಡ 7ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 149 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ವಿಕೆಟ್ ಕೀಪರ್ ಮುಶ್ಫೀಕುರ್ರಹೀಂ ಔಟಾಗದೆ 60 ರನ್ (43ಎ, 8ಬೌ, 1ಸಿ ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಮುಹಮ್ಮದ್ ನಯೀಮ್ 26ರನ್, ಸೌಮ್ಯ ಸರ್ಕಾರ್ 39ರನ್, ಲಿಟನ್‌ದಾಸ್ 7ರನ್ ಗಳಿಸಿದರು. ನಾಯಕ ಮಹ್ಮುದಲ್ಲಾ ಅವರು ಚೊಚ್ಚಲ ಪಂದ್ಯವನ್ನು ಆಡಿದ ಶಿವಮ್ ದುಬೆ ಅವರ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಮಹ್ಮುದುಲ್ಲಾ ಔಟಾಗದೆ 15 ರನ್ ಗಳಿಸಿದರು. ಇದಕ್ಕೂ ಮೊದಲು ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತ್ತು.