ಗ್ರಾ.ಪಂ. ಪೌರ ಕಾರ್ಮಿಕರಿಗೆ 40 ತಿಂಗಳಿಂದ ಸಂಬಳವಿಲ್ಲ !

Update: 2019-11-03 17:47 GMT

ಬೆಂಗಳೂರು, ನ.3: ನಾವು ಊರನ್ನು ಗುಡಿಸುತ್ತೇವೆ, ಚರಂಡಿಗಳನ್ನು ಸ್ವಚ್ಚ ಮಾಡುತ್ತೇವೆ. ಆದರೆ, ಸಂಬಳ ಮಾತ್ರ ಇಲ್ಲವಾಗಿದೆ. ಸುಮಾರು 40, 20 ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುತ್ತಿದ್ದರೂ ನಮ್ಮ ಗೋಳನ್ನು ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು ಕೇಳಿಸಿಕೊಳ್ಳುತ್ತಿಲ್ಲ.

ಇದು ಗ್ರಾಮ ಪಂಚಾಯತ್‌ಗಳಲ್ಲಿ ಕಸ ಗುಡಿಸುವವರು, ಚರಂಡಿ ಸ್ವಚ್ಚ ಮಾಡುವವರು, ಬಿಲ್ ಕಲೆಕ್ಟರ್, ಪಂಪ್ ಅಪರೇಟರ್‌ಗಳು ಸೇರಿದಂತೆ ಕೆಳ ಹಂತದಲ್ಲಿ ಕೆಲಸ ಮಾಡುತ್ತಿರುವ ಸುಮಾರು 61 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ಯಾತನೆಯಾಗಿದೆ.

ಈ ಸಿಬ್ಬಂದಿಗಳನ್ನು ಮಾತನಾಡಿಸುತ್ತಾ ಹೋದಂತೆ ಒಬ್ಬೊಬ್ಬರದು ಒಂದೊಂದು ಯಾತನೆಯ ಕತೆ ಬಿಚ್ಚಿಕೊಳ್ಳುತ್ತದೆ. "ನನಗೆ 4,800 ರೂ. ಸಂಬಳ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇನೆ. ಪ್ರತಿದಿನ ಊರೆಲ್ಲಾ ಸುತ್ತಾಡಿ ಕಸ ಗುಡಿಸಿ ಬರುತ್ತೇನೆ. ಆದರೆ, ನನಗೆ ಕಳೆದ 40 ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಪಂಚಾಯತ್‌ನ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಕೇಳಿದರೆ, ಸರಕಾರದಿಂದ ಹಣ ಬಂದಿಲ್ಲವೆಂದು ಸಬೂಬು ಹೇಳುತ್ತಾರೆ. ಸಂಬಳವಿಲ್ಲದೆ ನನ್ನ ಮಕ್ಕಳಿಗೆ ಬಟ್ಟೆ ಸೇರಿದಂತೆ ಅವರಿಗೆ ಕೇಳಿದ್ದನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ಹೆತ್ತ ತಪ್ಪಿಗೆ ಈಗ ಪರಿತಪಿಸುವಂತಾಗಿದೆ. ಈಗ ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾರೆ. ನಾವು ಕೆಲಸ ಮಾಡಿದರೂ ನಮಗೆ ಸಂಬಳ ಕೊಡುತ್ತಿಲ್ಲ. ದಯಮಾಡಿ ನಮಗೆ ಸಂಬಳ ಕೊಡಿಸಿ" ಎಂದು ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಶಿವಮ್ಮಾ, ಪಾರ್ವತಮ್ಮ, ಲಕ್ಷ್ಮಮ್ಮ ಹಾಗೂ ಭಾಗ್ಯ ಎಂಬುವವರು ಕಣ್ಣೀರು ಸುರಿಸುತ್ತಾರೆ. 

ಕಲಬುರಗಿ ತಾಲೂಕಿನ ಮಲ್ಲಣ್ಣ ಎಂಬುವವರು ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಇವರಿಗೂ ಸರಿಯಾಗಿ ಸಂಬಳವಾಗುತ್ತಿಲ್ಲ. ಪಂಚಾಯತ್ ಅಧ್ಯಕ್ಷರ ಬಳಿ ಗೋಗರೆದಾಗ ಒಂದು ತಿಂಗಳ ಸಂಬಳ ನೀಡುತ್ತಾರೆ. ಪುನಃ ಆರು ತಿಂಗಳು ಕೊಡುವುದಿಲ್ಲ. ಹೀಗಾಗಿ ನಮ್ಮ ಸಂಬಳವನ್ನು ನೇರವಾಗಿ ನಮ್ಮ ಬ್ಯಾಂಕ್ ಖಾತೆಗಳಿಗೆ ಹಾಕುವಂತಹ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕೆಳ ಹಂತದಲ್ಲಿ ದುಡಿಯುತ್ತಿರುವ ನಮಗೆ ಗ್ರಾಮ ಪಂಚಾಯತ್‌ಗಳಲ್ಲಿ ಕುಳಿತು ಕೊಳ್ಳಲು ಒಂದು ಕುರ್ಚಿ ಇರುವುದಿಲ್ಲ. ನಮ್ಮನ್ನು ಉದಾಸೀನವಾಗಿ ಕಾಣುತ್ತಾರೆ. ನಾವು ಪಂಚಾಯತ್‌ಗಳಲ್ಲಿ ಸುಮಾರು 10-15ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ನಮ್ಮ ವಿವರಗಳನ್ನು ಎಲ್ಲಿಯೂ ದಾಖಲಿಸುತ್ತಿಲ್ಲ. ಇದರಿಂದ ನಮ್ಮ ಸೇವಾ ಹಿರಿತನವಾಗಲಿ, ನಮ್ಮ ಕೆಲಸದ ಮಾಹಿತಿ ಇಲಾಖೆಗೆ ಸಿಗುವುದೇ ಇಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

-ಮಲ್ಲಣ್ಣ ಬಿಲ್ ಕಲೆಕ್ಟರ್, ಕಲಬುರಗಿ

ಈಗಲೂ ಗ್ರಾಮಗಳಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ ಜೀವಂತವಾಗಿದೆ. ಇದು ಗ್ರಾಮ ಪಂಚಾಯತ್‌ಗಳಲ್ಲಿ ದುಡಿಯುತ್ತಿರುವ ಕೆಳ ಹಂತದ ಸಿಬ್ಬಂದಿಗಳ ಮೇಲೂ ಪರಿಣಾಮ ಬೀರುತ್ತಿದೆ. ಕಸ ಗುಡಿಸುವವರು, ಚರಂಡಿ ಸ್ವಚ್ಚ ಮಾಡುವವರು ಬಹುತೇಕರು ದಲಿತರೇ ಆಗಿರುವುದರಿಂದ ಅವರ ಸಮಸ್ಯೆಗಳು ಹಾಗೆಯೇ ಜೀವಂತವಾಗಿವೆ. ಹಲವು ಕಡೆಗಳಲ್ಲಿ ಗ್ರಾಮ ಪಂಚಾಯತ್‌ಗೆ ದಲಿತ ವ್ಯಕ್ತಿಯೊಬ್ಬ ಅಧ್ಯಕ್ಷನಾದರೆ, ಆತನಿಗೆ ಕುರ್ಚಿ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೀದಿ ಗುಡಿಸುವವರ ಸಮಸ್ಯೆಯನ್ನು ಯಾರು ಕೇಳುತ್ತಾರೆ’

-ಮಾರುತಿ ಮಾನ್ಪಡೆ, ಅಧ್ಯಕ್ಷ, ಗ್ರಾಮ ಪಂಚಾಯತ್ ನೌಕರರ ಸಂಘ

Writer - ಮಂಜುನಾಥ ದಾಸನಪುರ

contributor

Editor - ಮಂಜುನಾಥ ದಾಸನಪುರ

contributor

Similar News