ತಮಿಳುನಾಡು: ತಿರುವಳ್ಳುವರ್ ಪ್ರತಿಮೆಗೆ ಹಾನಿ
ಚೆನ್ನೈ, ನ.4: ತಮಿಳುನಾಡಿನ ಪಿಳ್ಳಯರ್‌ಪಟ್ಟಿಯಲ್ಲಿರುವ ತಮಿಳು ಕವಿ ಮತ್ತು ತತ್ವಜ್ಞಾನಿ ತಿರುವಳ್ಳವರ್ ಅವರ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಎಸಗಿರುವ ಘಟನೆ ಸೋಮವಾರ ನಡೆದಿದೆ. ಇದಕ್ಕೂ ಮೊದಲು ಬಿಜೆಪಿ ತಮಿಳುನಾಡು ಘಟಕ ಕೇಸರಿ ಬಟ್ಟೆ ಸಹಿತ ಬೂದಿ ಮತ್ತು ರುದ್ರಾಕ್ಷಿ ಸರ ಧರಿಸಿರುವ ತಿರುವಳ್ಳವರ್ ಅವರ ಪ್ರತಿಮೆಯ ಫೋಟೋವನ್ನು ಟ್ವೀಟ್ ಮಾಡಿತ್ತು.
ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಮತ್ತು ದೇವರನ್ನು ನಂಬುತ್ತಿರುವವರನ್ನು ಹೀಯಾಳಿಸುತ್ತಿರುವ ಡಿಎಂಕೆ ಮತ್ತು ಕಮ್ಯುನಿಸ್ಟರನ್ನು ಉದ್ದೇಶಿಸಿ ಈ ರೀತಿಯ ಫೋಟೋ ಪ್ರಕಟಿಸಿರುವುದಾಗಿ ಹೇಳಲಾಗಿದೆ. ಘಟನೆಯನ್ನು ಖಂಡಿಸಿರುವ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ಪೆರಿಯಾರರ ಪ್ರತಿಮೆಗೆ ಹಾನಿ ಎಸಗಲಾಗಿದೆ. ಅಲ್ಲದೆ, ಪೆರಿಯಾರರ ಫೋಟೊವನ್ನು ಕೇಸರೀಕರಣಗೊಳಿಸಿರುವ ಪ್ರಕರಣವೂ ನಡೆದಿದೆ. ತಮಿಳಿಗಾಗಿ ಹೋರಾಟ ನಡೆಸಿದ ಜನರಿಗೆ ಅಗೌರವ ತೋರಲಾಗುತ್ತಿದ್ದು ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಜ್ಯದ ಎಐಎಡಿಂಕೆ ಸರಕಾರ ನಾಚಿಗೆ ಪಟ್ಟುಕೊಂಡು ಉರುಳು ಹಾಕಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ತಿರುವಳ್ಳವರ್ ಪ್ರತಿಮೆಯ ಮುಖಕ್ಕೆ ಮಸಿ ಬಳಿದಿರುವ ಕಿಡಿಗೇಡಿಗಳು ಪ್ರತಿಮೆಗೆ ಸೆಗಣಿ ಎರಚಿ ಹಾನಿ ಮಾಡಿದ್ದಾರೆ. ಬಳಿಕ ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದು ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮಧ್ಯೆ, ಥೈಲ್ಯಾಂಡ್‌ಗೆ 3 ದಿನದ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಥಾಯ್ ಭಾಷೆಯಲ್ಲಿರುವ ‘ತಿರುಕ್ಕುರಲ್’ ಕುರಿತ ಪುಸ್ತಕವನ್ನು ಶುಕ್ರವಾರ ಬಿಡುಗಡೆಗೊಳಿಸಿದ್ದಾರೆ.