ಬಡವರ ವಿರುದ್ಧ ತಾರತಮ್ಯವೆಸಗುವ ನೀಟ್ ಅನ್ನು ಸರಕಾರವೇಕೆ ರದ್ದುಗೊಳಿಸುತ್ತಿಲ್ಲ ?

Update: 2019-11-04 17:51 GMT

ಚೆನ್ನೈ,ನ.4: ನೀಟ್ ಪರೀಕ್ಷೆಗಾಗಿ ತರಬೇತಿ ನೀಡುವ ಖಾಸಗಿ ಸಂಸ್ಥೆಗಳು ಐದು ಲ.ರೂ.ವರೆಗೂ ಶುಲ್ಕವನ್ನು ವಿಧಿಸುತ್ತಿರುವುದರಿಂದ ಅವುಗಳಲ್ಲಿ ತರಬೇತಿ ಪಡೆಯಲು ಬಡವರಿಗೆ ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯವು,ಖಾಸಗಿ ತರಬೇತಿ ಕೇಂದ್ರಗಳಿಗೆ ಹಾಜರಾಗುವವರು ಮಾತ್ರ ವೈದ್ಯಕೀಯ ಸೀಟ್‌ಗಳನ್ನು ಪಡೆಯುತ್ತಿರುವುದರಿಂದ ನೀಟ್‌ನಿಂದ ಬಡವರಿಗೆ ಯಾವುದೇ ಲಾಭವಿಲ್ಲ ಮತ್ತು ಮೆಡಿಕಲ್ ಕಾಲೇಜುಗಳು ಬಡವಿದ್ಯಾರ್ಥಿಗಳಿಗೆ ಎಂದೂ ಬಾಗಿಲು ತೆರೆಯುವುದಿಲ್ಲ ಎಂದು ಹೇಳಿದೆ.

ನಕಲಿ ಪರೀಕ್ಷಾರ್ಥಿಯೋರ್ವ ನೀಟ್‌ಗೆ ಹಾಜರಾಗಿದ್ದ ಪ್ರಕರಣವೊಂದರ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಲಯವು,ಹಿಂದಿನ ಯುಪಿಎ ಸರಕಾರದ ಇತರೆಲ್ಲ ಕಾರ್ಯಕ್ರಮಗಳನ್ನು ಹಿಂದೆಗೆದುಕೊಂಡಿರುವ ಕೇಂದ್ರ ಸರಕಾರವು ನೀಟ್‌ಗೆ ಮಾತ್ರ ಏಕೆ ವಿನಾಯಿತಿ ನೀಡಿದೆ ಎಂದು ಪ್ರಶ್ನಿಸಿತು.

ನೀಟ್ ಬಡವರ ವಿರುದ್ಧ ತಾರತಮ್ಯವನ್ನೆಸಗುತ್ತಿದೆ. ಐದು ಲ.ರೂ.ಗಳನ್ನು ನೀಡಿ ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವವರು ಮಾತ್ರ ವೈದ್ಯಕೀಯ ಸೀಟ್‌ಗಳನ್ನು ಪಡೆಯುತ್ತಿರುವುದು ಆಘಾತಕಾರಿಯಾಗಿದೆ. ಕಾಂಗ್ರೆಸ್-ಡಿಎಂಕೆ ಆಡಳಿತದಲ್ಲಿ ಜಾರಿಗೊಳಿಸಿದ್ದ ನೀಟ್‌ನಂತಹ ಕಾರ್ಯಕ್ರಮಗಳನ್ನು ಕೇಂದ್ರವೇಕೆ ರದ್ದುಗೊಳಿಸುತ್ತಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಿತು.

ಸರಕಾರಿ ವೈದ್ಯರಿಗೆ ಕಡಿಮೆ ವೇತನ ನೀಡುತ್ತಿರುವುದಕ್ಕಾಗಿ ತಮಿಳು ನಾಡು ಸರಕಾರವನ್ನೂ ತೀವ್ರ ತರಾಟೆಗೆತ್ತಿಕೊಂಡ ನ್ಯಾಯಾಲಯವು,ವೈದ್ಯರಿಗೆ ಕೇವಲ 57,000 ರೂ.ವೇತನ ನೀಡಲಾಗುತ್ತಿದೆ,ಆದರೆ ಸರಕಾರಿ ಶಾಲೆಗಳ ಶಿಕ್ಷಕರು ಮತ್ತು ಹೈಕೋರ್ಟ್ ನ್ಯಾಯಾಧೀಶರ ಆಪ್ತ ಸಹಾಯಕರು ಅವರಿಗಿಂತ ಹೆಚ್ಚು ವೇತನಗಳನ್ನು ಪಡೆಯುತ್ತಿದ್ದಾರೆ ಎಂದು ಬೆಟ್ಟು ಮಾಡಿತು. ಪ್ರಕರಣದ ವಿಚಾರಣೆಯನ್ನು ನ.7ಕ್ಕೆ ಮುಂದೂಡಿದ ನ್ಯಾಯಾಲಯವು,ನೀಟ್‌ಗೆ ನಕಲಿ ಪರೀಕ್ಷಾರ್ಥಿಗಳು ಹಾಜರಾಗಿದ್ದ ಬಗ್ಗೆ ದೂರುಗಳೇನಾದರೂ ಬಂದಿವೆಯೇ ಎನ್ನುವುದನ್ನು ತಿಳಿಸುವಂತೆ ಸಿಬಿಐಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News