ಶಿವಸೇನೆಯ 25 ಶಾಸಕರು ಫಡ್ನವೀಸ್ ಸಂಪರ್ಕದಲ್ಲಿ: ಪಕ್ಷೇತರ ಶಾಸಕನ ಹೇಳಿಕೆ

Update: 2019-11-05 18:26 GMT

ಮುಂಬೈ, ನ.5: ಶಿವಸೇನೆಯು ಬಿಜೆಪಿಯೊಂದಿಗೆ ಹೋಗದಿದ್ದರೆ ಪಕ್ಷ ಹೋಳಾಗಲಿದೆ. ಪಕ್ಷದ 25 ಶಾಸಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಗೆ ಬೆಂಬಲ ಘೋಷಿಸಿರುವ ಪಕ್ಷೇತರ ಶಾಸಕ ರವಿ ರಾಣಾ ಹೇಳಿದ್ದಾರೆ.

ಶಿವಸೇನೆಯ ಮುಖಂಡ, ‘ಸಾಮ್ನ’ದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವತ್ ಸ್ವಂತವಾಗಿ ಯೋಚಿಸಲು ಶಕ್ತಿಯಿಲ್ಲದೆ, ಇತರರು ಹೇಳುವುದನ್ನೇ ಉಚ್ಚರಿಸುವ ಗಿಣಿ ಎಂದು ಟೀಕಿಸಿದ ರವಿ ರಾಣಾ, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದರಿಂದ ಮಾತ್ರ ಶಿವಸೇನೆ 56 ಸ್ಥಾನಗಳನ್ನು ಗೆದ್ದಿದೆ. ಸ್ವಂತ ನೆಲೆಯಲ್ಲಿ ಸ್ಪರ್ಧಿಸಿದ್ದರೆ 25 ಸ್ಥಾನವೂ ಸಿಕ್ಕುತ್ತಿರಲಿಲ್ಲ. ಶಿವಸೇನೆಯ 25 ಶಾಸಕರು ಫಡ್ನವೀಸ್ ಹಾಗೂ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಶಿವಸೇನೆ ವಿಪಕ್ಷದಲ್ಲಿ ಕೂರಲು ನಿರ್ಧರಿಸಿದ ತಕ್ಷಣ ಇವರೆಲ್ಲಾ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದವರು ಹೇಳಿದರು.

 ಮತದಾರರು ಸ್ಪಷ್ಟ ಜನಾದೇಶ ನೀಡಿದ್ದರೂ ಸೇನೆಯು ಸರಕಾರ ರಚನೆಗೆ ಅಡ್ಡಿ ಉಂಟುಮಾಡುತ್ತಿದೆ. ಇದು ಮಹಾರಾಷ್ಟ್ರದ ಜನತೆಗೆ ಮಾಡಿರುವ ಅವಮಾನವಾಗಿದೆ . ಸರಕಾರ ರಚನೆಯ ವಿಷಯದ ಬಗ್ಗೆ ಸಂಜಯ್ ರಾವತ್‌ರ ಬದಲು ಉದ್ಧವ್ ಠಾಕ್ರೆ ಮಾತಾಡಲಿ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಫಡ್ನವೀಸ್ ಜೊತೆಗೆ ನಡೆದ ಸಭೆಯಲ್ಲಿ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಪಾಲ್ಗೊಂಡಿದ್ದರು. ರಾವತ್ ಅಲ್ಲ ಎಂದು ರಾಣಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News