ಸಾಲಮನ್ನಾಕ್ಕೆ ಆಗ್ರಹ: ಕಾಡಕ್ಕೇರಿಯಲ್ಲಿ ಬೃಹತ್ ಜನಜಾಗೃತಿ ಸಮಾವೇಶ

Update: 2019-11-06 06:09 GMT

ಬಜ್ಪೆ, ನ.6: ಬಡ ವರ್ಗದ ಜನರ ರಕ್ತ ಹೀರಿ ಬೆಳೆದಿರುವಂತಹ ಬಂಡವಾಳಶಾಹಿಗಳಿಂದ ಸ್ಥಾಪಿತಸಲ್ಪಟ್ಟಿರುವಂತಹ ಮೈಕ್ರೋಫೈನಾನ್ಸ್ ಗಳು ಬಡವರನ್ನು ಸುಲಿಗೆ ಮಾಡುತ್ತಿದ್ದು ಇಂತಹ ಮೈಕ್ರೋಫೈನಾನ್ಸ್‌ಗಳನ್ನು ಒದ್ದೋಡಿಸುವವರೆಗೆ ಹೋರಾಟ ನಡೆಸುತ್ತೆವೆ ಎಂದು ದ.ಕ. ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಹೇಳಿದ್ದಾರೆ.

ದ.ಕ. ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಆಶ್ರಯದಲ್ಲಿ ಕುಪ್ಪೆಪದವು ಋಣಮುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಕುಪ್ಪೆಪದವಿನ ಕಾಡಕ್ಕೇರಿಯಲ್ಲಿ ಮಂಗಳವಾರ ನಡೆದ ಸಾಲ ಸಂತ್ರಸ್ತ ಮಹಿಳೆಯರ ಹಾಗೂ ಪ್ರಜ್ಞಾವಂತ ನಾಗರಿಕರಿಂದ ಬಡ ಜನರ ಸಾಲಮನ್ನಾಕ್ಕೆ ಆಗ್ರಹಿಸಿ ನಡೆದ ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡವರಿಗೆ ಸಾಲ ನೀಡಲು ಸತಾಯಿಸುತ್ತಿದೆ. ಈ ಕಾರಣಕ್ಕೆ ಬಡವರು ಸುಲಭವಾಗಿ ಸಾಲ ನೀಡುವಂತಹ ಮೈಕ್ರೋಫೈನಾನ್ಸ್ ಗಳಿಗೆ ಮೊರೆ ಹೋಗುವಂತಾಗಿದೆ. ಆದರೆ ಇವರು ಕೇವಲ ಆಧಾರ್ ಕಾರ್ಡಿನ ಆಧಾರದಲ್ಲಿ ಸಾಲ ನೀಡಿ ಕಾನೂನಿಗಿಂತ ಅಧಿಕ ಬಡ್ಡಿ ವಿಧಿಸುವ ಮೂಲಕ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ಸಣ್ಣ ವ್ಯವಹಾರಗಳಿಗೆ ಅನುಮತಿ ಪಡೆದುಕೊಂಡು ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿವೆ. ಬಡವರಿಗೆ ನೀಡಿರುವ ಸಾಲವನ್ನು ದಬ್ಬಾಳಿಕೆಯ ಮೂಲಕ ವಸೂಲಿಗೆ ಮುಂದಾದರೆ ಕಾನೂನು ರೀತಿಯ ಹೋರಾಟ ಸೇರಿದಂತೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬೆಳ್ತಂಗಡಿ ತಾಲೂಕು ಸಿಐಟಿಯು ಸಮಿತಿಯ ಅಧ್ಯಕ್ಷ ಎಲ್.ಮಂಜುನಾಥ್, ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ, ಬೆಳ್ತಂಗಡಿ ತಾಲೂಕು ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಸಂತೋಷ್ ನಿನ್ನಿಕಲ್ಲು, ಕಾರ್ಯದರ್ಶಿ ಕೇಶವ ಬಲ್ಯ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಳ್ತಂಗಡಿ ಇದರ ಸಂಚಾಲಕ ನೇಮಿರಾಜ್ ಕಿಲ್ಲೂರು, ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದಾಸಪ್ಪಎಡಪದವು, ದ.ಕ. ಜಿಲ್ಲಾ ವಿದ್ಯಾರ್ಥಿ ಸೋಶಿಯಲ್ ಎಜುಕೇಷನ್ ಸೊಸೈಟಿಯ ನಿರ್ದೇಶಕ ಶ್ರೀನಿವಾಸ್, ಎಂಎಸ್ ಬಿಎಸ್ಪಿ ಪಕ್ಷದ ಸಂಯೋಜಕ ಗೋಪಾಲ್ ಮುತ್ತೂರು, ದಲಿತ ಮುಖಂಡ ಹರಿಯಪ್ಪಮುತ್ತೂರು ಹಾಜರಿದ್ದರು.

ಅಹ್ಮದ್ ಬಾವ ನಡುಪಲ್ಲ ಅತಿಥಿಗಳನ್ನು ಸ್ವಾಗತಿಸಿದರು. ನಿತಿನ್ ಮುತ್ತೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News