ಫರಂಗಿಪೇಟೆಯಲ್ಲಿ ಪೊಲೀಸ್ ಬೀಟ್ ಸಭೆ

Update: 2019-11-06 08:19 GMT

ಫರಂಗಿಪೇಟೆ,  ನ.6: ಅಪರಾಧ ಚಟುವಟಿಕೆ ತಡೆಯುವ ಮತ್ತು ಕಡಿಮೆಗೊಳಿಸುವ ಹಾಗೂ ಕೆಲವು ಅಗತ್ಯ ಮೂಲ ಸೌಕರ್ಯಕ್ಕೆ ತೊಡಕಾಗುವ ಸಂದರ್ಭ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪೊಲೀಸ್ ಇಲಾಖೆ ಮತ್ತು ಸಮಾಜದ ರಾಜಕೀಯ ಧಾರ್ಮಿಕ ಮುಖಂಡರುಗಳ ಸಮ್ಮುಖದಲ್ಲಿ ನಡೆಯುವ ಪೊಲೀಸ್ ಬೀಟ್ ಸಭೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಹಾಲ್ ನಲ್ಲಿ ಸೋಮವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಪ್ರಸನ್ನ, ಪೊಲೀಸ್ ಬೀಟ್ ಸಭೆ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಒಂದು ಸೇತುವೆಯಾಗಿ ಕೆಲಸ ಮಾಡುತ್ತಿದೆ. ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯಲ್ಲಿ ಇಲ್ಲಿನ ಮುಖಂಡರುಗಳ ಸಹಕಾರದಿಂದ ಕಳೆದ ಎರಡು ವರ್ಷದಲ್ಲಿ ಯಾವುದೇ ಸಂಘರ್ಷದ ವಾತಾವರಣ ಸ್ರಷ್ಟಿಯಾಗಿಲ್ಲ. ಯಾವುದೇ ಪ್ರಕರಣ ಸಂಭವಿಸಿದರೆ ತಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿರಿ ಎಂದರು.

  ಅಪರಾಧ ತಡೆಯುವ ಮತ್ತು ನೈಜ ತಪ್ಪಿತಸ್ಥರನ್ನು ಕಾನೂನು ಕಟ್ಟಳೆಗೆ ತರುವ ಉದ್ದೇಶದಿಂದ ಫರಂಗಿಪೇಟೆ ಮತ್ತು ಕಡೆಗೋಲಿಯಲ್ಲಿ ವಿಶೇಷ ತಂತ್ರಜ್ಞಾನದ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದವರು ಹೇಳಿದರು,                           

ಸಭೆಯಲ್ಲಿ ಕೇಳಿಬಂದ ಸಾರ್ವಜನಿಕರ ಬೇಡಿಕೆಗಳು

 ಕುಂಪನಮಜಲ್ ಮತ್ತು ಅಮೆಮಾರ್ ಗೆ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾಗಿರುವುದರಿಂದ ಹೆದ್ದಾರಿ ಕ್ರಾಸಿಂಗ್ ನ್ನು ಬದಲಾವಣೆ ಮಾಡಬೇಕು, ತೇವು ಪೂಪಾಡಿ ಕಲ್ಲು ಎಂಬಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಕುಂಪನಮಜಲ್ ರೈಲ್ವೆ ಲೆವೆಲ್ ಕ್ರಾಸಿಂಗ್ ಶಾಶ್ವತಗೊಳಿಸಬೇಕು, ಬೆಂಜನಪದವು-ಕೊಡ್ಮಾಣ್ ಸಂಪರ್ಕಿಸುವ ರಸ್ತೆಗೆ ರಿಫ್ಲೆಕ್ಟ್ ಸ್ಟಿಕ್ಕರ್ ಮತ್ತು ಬ್ಯಾರಿಕೇಡ್ ನಿಲ್ಲಿಸಬೇಕು, ಫರಂಗಿಪೇಟೆ ಮಸೀದಿಯ ಬಳಿ ಬ್ಯಾರಿಕೇಡ್ ನಿಲ್ಲಿಸಬೇಕು, ಫರಂಗಿಪೇಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಹೆದ್ದಾರಿಯ ಬದಿಯಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದ್ದು ಪಾದಚಾರಿ ಹೆದ್ದಾರಿಯಲ್ಲಿಯೇ ಸಂಚರಿಸಬೇಕಾಗಿದ್ದರಿಂದ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮತ್ತು ಚರಂಡಿ ಕಾಮಗಾರಿಯನ್ನು ಪೂರ್ತಿಗೊಳಿಸಬೇಕು, ಫರಂಗಿಪೇಟೆ ಹಳೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ತೊಡಕಾಗುತ್ತಿದ್ದು ಒಂದು ದಿನ ಒಂದು ಬದಿಯಲ್ಲಿ ಮಾತ್ರ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಬೇಕು ಒತ್ತಾಯ ಕೇಳಿ ಬಂತು.

 ಈ  ಬಗ್ಗೆ ಪ್ರತಿಕ್ರಿಯಿಸಿದ ಎಸ್ಸೈ ಪ್ರಸನ್ನ ಸಾರ್ವಜನಿಕ ಹಿತಾಸಕ್ತಿಗಾಗಿ ಪೊಲೀಸ್ ಇಲಾಖೆ ವತಿಯಿಂದ ಮಾಡಬೇಕಾದವುಗಳನ್ನು ಮಾಡುತ್ತೇವೆ ಮತ್ತು ವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂದಿಸಿದ ವಿಷಯಗಳನ್ನುಆಯಾ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.

 ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ತುಂಬೆ ತಾಲೂಕ್ ಪಂಚಾಯತ್ ಸದಸ್ಯ ಗಣೇಶ್, ಸೇವಾಂಜಲಿ ಆಡಳಿತ ಮಂಡಳಿಯ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಮೇರಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಮೇರಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ, ಸದಸ್ಯ ಮೆಂಡೋನ್ಸಾ ಮೇರಮಜಲ್, ಕರಾವಳಿ ರಿಕ್ಷಾ ಪಾರ್ಕ್ ಚಾಲಕ ಮಾಲಕ ಸಂಘದ ಅಧ್ಯಕ್ಷ ಅರುಣ್ ಪದೆoಜಾರ್, ನಂ.1 ರಿಕ್ಷಾ ಪಾರ್ಕ್ ಚಾಲಕ ಮಾಲಕ ರ ಸಂಘದ ಸಮಿತಿ ಸದಸ್ಯ ರಶೀದ್ ಪಾವೂರ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ವಿವಿಧ ರಾಜಕೀಯ ಧಾರ್ಮಿಕ ಸಾಮಾಜಿಕ ಮುಖಂಡರು ಬಾಗವಹಿಸಿ ವಿವಿಧ ಅಹವಾಲುಗಳನ್ನು ನೀಡಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News