ತಿರುವಳ್ಳುವರ್‌ ಪ್ರತಿಮೆಗೆ ಕೇಸರಿ ಶಾಲು ಹೊದಿಸಿದ ಸಂಘಪರಿವಾರ ನಾಯಕನ ಬಂಧನ

Update: 2019-11-06 16:15 GMT

ಚೆನ್ನೈ, ನ. 6: ಸಂಘಪರಿವಾರದ ನಾಯಕರೋರ್ವರು ತಿರುವಳ್ಳುವರ್ ಪ್ರತಿಮೆಗೆ ಕೇಸರಿ ಶಾಲು ಹೊದಿಸಿ, ರುದ್ರಾಕ್ಷಿ ಮಾಲೆಯಿಂದ ಅಲಂಕರಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗುವುದರೊಂದಿಗೆ ತಿರುವಳ್ಳುವರ್ ಕೇಸರೀಕರಣದ ವಿವಾದ ಬುಧವಾರ ಕೂಡ ಮುಂದುವರಿದಿದೆ.

ಸೆಗಣಿ ಎರಚುವ ಮೂಲಕ ಭಗ್ನಗೊಳಿಸಿದ ತಿರುವಳ್ಳುವರ್ ಪ್ರತಿಮೆ ಇರುವ ತಂಜಾವೂರು ಜಿಲ್ಲೆಯ ಪಿಲ್ಲಾಯರ್‌ಪಟ್ಟಿಗೆ ಭೇಟಿ ನೀಡಿದ ಗಂಟೆಗಳ ಬಳಿಕ ಹಿಂದೂ ಮಕ್ಕಳ್ ಕಚ್ಚಿ ಅಧ್ಯಕ್ಷ ಅರ್ಜುನ್ ಸಂಪತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗೆ ಕುಪ್ರಸಿದ್ಧರಾಗಿರುವ ಸಂಪತ್ ಏಣಿ ಹತ್ತಿ ಪ್ರತಿಮೆ ಗೆ ಕೇಸರಿ ಶಾಲು ಹೊದಿಸಿದ್ದಾರೆ. ರುದ್ರಾಕ್ಷಿ ಮಾಲೆಯಿಂದ ಅಲಂಕರಿಸಿ ದೀಪ ಹಚ್ಚಿದ್ದಾರೆ.

ಈ ಘಟನೆಯ ದೃಶ್ಯವನ್ನು ಟಿ.ವಿ. ವಾಹಿನಿಯೊಂದು ಪ್ರಸಾರ ಮಾಡಿತ್ತು. ಕೂಡಲೇ ಪೊಲೀಸರು ಸಂಪತ್ ಅವರನ್ನು ವಶಕ್ಕೆ ತೆಗೆದುಕೊಂಡರು. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತಿರುವಳ್ಳುವರ್ ರನ್ನು ಕೇಸರಿಕರಣಗೊಳಿಸುತ್ತಿರುವ ನಡುವೆ ಸಂಪತ್ ಈ ಕೃತ್ಯ ನಡೆಸಿದ್ದಾರೆ. ತಮಿಳುನಾಡು ಉದಯವಾದ ದಿನವಾದ ನವೆಂಬರ್ 1ರಂದು ರಾಜ್ಯ ಬಿಜೆಪಿ ಟ್ವಿಟ್ಟರ್‌ನಲ್ಲಿ ತಿರುವಳ್ಳುವರ್‌ಗೆ ಕೇಸರಿ ಉಡುಪು ಹಾಕಿದ ಚಿತ್ರವನ್ನು ಪೋಸ್ಟ್ ಮಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News