ನೀರವ್ ಮೋದಿಗೆ ಮತ್ತೆ ಜಾಮೀನು ನಿರಾಕರಿಸಿದ ಲಂಡನ್ ನ್ಯಾಯಾಲಯ

Update: 2019-11-06 16:26 GMT

 ಲಂಡನ್, ನ. 6: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಸುಮಾರು 14,000 ಕೋಟಿ ರೂಪಾಯಿ ವಂಚಿಸಿ ಲಂಡನ್‌ನಲ್ಲಿ ಆಶ್ರಯ ಪಡೆದಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಹೊಸದಾಗಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬ್ರಿಟನ್‌ನ ನ್ಯಾಯಾಲಯವೊಂದು ಬುಧವಾರ ತಿರಸ್ಕರಿಸಿದೆ.

ಮೋದಿಯನ್ನು ಗಡಿಪಾರು ಮಾಡುವಂತೆ ಕೋರಿ ಭಾರತ ಬ್ರಿಟನ್ ಸರಕಾರಕ್ಕೆ ಸಲ್ಲಿಸಿದ ಮನವಿಯ ಆಧಾರದಲ್ಲಿ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಆತನನ್ನು ಮಾರ್ಚ್ 19ರಂದು ಬಂಧಿಸಿದ್ದಾರೆ.

 ಆತನ ಗಡಿಪಾರು ವಿಚಾರಣೆ ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಲಿದೆ. ಅಲ್ಲಿವರೆಗೆ ಜಾಮೀನು ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಕ್ಕಾಗಿ ಆತನನ್ನು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಯಿತು.

ಆದರೆ ನ್ಯಾಯಾಧೀಶೆ ಎಮ್ಮಾ ಆ್ಯರ್ ಬತ್‌ನಾಟ್ ಮೋದಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಜಾಮೀನು ಭದ್ರತಾ ಮೊತ್ತವನ್ನು 20 ಲಕ್ಷ ಪೌಂಡ್‌ನಿಂದ 40 ಲಕ್ಷ ಪೌಂಡ್‌ಗೆ ಏರಿಸುವ ಕೊಡುಗೆಯನ್ನು ಮೋದಿ ನೀಡಿದರಾದರೂ, ನ್ಯಾಯಾಧೀಶೆ ಅದನ್ನು ಪರಿಗಣಿಸಲಿಲ್ಲ.

ತಾನು ಮಾನಸಿಕ ಒತ್ತಡ ಮತ್ತು ಬಳಲಿಕೆಯಿಂದ ಬಳಲುತ್ತಿದ್ದೇನೆ ಎಂಬ ಹಳೆಯ ಕಾರಣವನ್ನೇ ಅವರು ತನ್ನ ಹೊಸ ಜಾಮೀನು ಅರ್ಜಿಯಲ್ಲಿ ನೀಡಿದ್ದಾರೆ. ಆದರೆ, ಹಿಂದಿನ ಬಾರಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಕಾಣಿಸಿಕೊಂಡಿರುವುದಕ್ಕಿಂತ ಹೆಚ್ಚು ಆರೋಗ್ಯಯುತವಾಗಿ ಇಂದು ಕಾಣಿಸಿಕೊಂಡಿದ್ದಾರೆ.

 ಇದೇ ನ್ಯಾಯಾಲಯವು ಅವರ ಹಿಂದಿನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ, ಅವರು ಲಂಡನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯೂ ತಿರಸ್ಕೃತಗೊಂಡಿತ್ತು. ಅವರಿಗೆ ಜಾಮೀನು ಲಭಿಸಿದರೆ ಅವರು ಬೇರೆ ದೇಶಕ್ಕೆ ಪಲಾಯನಗೈಯಬಹುದು ಎನ್ನುವ ಭೀತಿ ಅವರ ಜಾಮೀನು ನಿರಾಕರಣೆಗೆ ಪ್ರಮುಖ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News