ಸುಳ್ಳು ಆರೋಪ ಸೃಷ್ಟಿಸಿ ವರಿಷ್ಠರ ವರ್ಚಸ್ಸಿಗೆ ಕಳಂಕ ತರಲು ಸಂಚು: ಇನ್ಫೋಸಿಸ್ ಖಂಡನೆ
ಹೊಸದಿಲ್ಲಿ, ನ.6: ಕಂಪೆನಿಯ ಸಹಸಂಸ್ಥಾಪಕರು ಹಾಗೂ ಮಾಜಿ ಉದ್ಯೋಗಿಗಳ ವಿರುದ್ಧ ಕೆಲವು ‘ಅನಾಮಿಕ ಮೂಲ’ಗಳು, ಕಿಡಿಗೇಡಿತನದಿಂದ ಕೂಡಿದ ಆರೋಪ ಗಳನ್ನು ಮಾಡುತ್ತಿರುವುದನ್ನು ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಪೋಸಿಸ್ ಟೀಕಿಸಿದೆ. ತಮ್ಮನ್ನು ‘ನೈತಿಕತೆಯುಳ್ಳ ಉದ್ಯೋಗಿ’ಗಳೆಂದು ಬಣ್ಣಿಸಿಕೊಂಡ ಕೆಲವು ನೌಕರರು, ಸೆಪ್ಟೆಂಬರ್ 20ರಂದು ಇನ್ಫೋಸಿಸ್‌ನ ಆಡಳಿತ ನಿರ್ದೇಶಕರಿಗೆ ಪತ್ರ ಬರೆದು, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಲಿಲ್ ಪರೇಖ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ನಿಲಾಂಜನ ರಾಯ್ ಅವರು ಕಂಪೆನಿಯ ಹಣಕಾಸು ವ್ಯವಹಾರಗಳನ್ನು ಅಕ್ರಮವೆಸಗಿದ್ದಾರೆ ಹಾಗೂ ಲಾಭಗಳನ್ನು ಹಿಗ್ಗಿಸಿ ಹೇಳುತ್ತಿದ್ದಾರೆ ಎಂದು ಆಪಾದಿಸಿದ್ದರು.
ಕಂಪೆನಿಯ ಅನೀತಿಯುತ ವ್ಯವಹಾರಗಳ ಕುರಿತ ಆರೋಪಗಳನ್ನು ದೃಢಪಡಿಸುವಂತಹ ಯಾವುದೇ ಪುರಾವೆಗಳು ತನ್ನ ಬಳಿಯಿಲ್ಲವೆಂದು ಕಂಪೆನಿಯು ಸೋಮವಾರ ಸ್ಪಷ್ಟಪಡಿಸಿತ್ತು.
ಈ ಊಹಾಪೋಹಗಳು ಭೀತಿಯನ್ನು ಸೃಷ್ಟಿಸುವಂತಹದ್ದಾಗಿವೆ ಹಾಗೂ ಸಂಸ್ಥೆಯ ಕೆಲವು ಸಮರ್ಥ ಹಾಗೂ ಗಣ್ಯ ವ್ಯಕ್ತಿಗಳ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಕೂಡಿದೆ ಎಂದು ಇನ್ಫೋಸಿಸ್‌ನ ಅಧ್ಯಕ್ಷ ನಂದನ್ ನಿಲೇಕಣಿ ಅವರು ಹೇಳಿಕೆ ಯೊಂದರಲ್ಲಿ ತಿಳಿಸಿದ್ದಾರೆ. ನಮ್ಮ ಸಹಸಂಸ್ಥಾಪಕರು ಜೀವಿತದುದ್ದಕ್ಕೂ ಸಂಸ್ಥೆಗೆ ನೀಡಿರುವ ಕೊಡುಗೆ ಬಗ್ಗೆ ನನಗೆ ಆಳವಾದ ಗೌರವವಿದೆ. ಅವರು ಈ ಸಂಸ್ಥೆಯನ್ನು ಕಟ್ಟಿದ್ದಾರೆ ಹಾಗೂ ಈ ಕಂಪೆನಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಹಾಗೂ ಇನ್ಫೋಸಿಸ್ ಸುದೀರ್ಘಾ ವಧಿಯ ಯಶಸ್ಸಿಗೆ ಬದ್ಧರಾಗಿಯೇ ಉಳಿದುಕೊಂಡಿದ್ದಾರೆ ಎಂದು ನಿಲೇಕಣಿ ತಿಳಿಸಿದ್ದಾರೆ.
ದೂರಿನಲ್ಲಿ ಮಾಡಲಾಗಿರುವ ಆರೋಪಗಳ ವಿರುದ್ಧ ಸ್ವತಂತ್ರ ತನಿಖೆ ನಡೆಸಲು ಲೆಕ್ಕಪತ್ರ ಸಮಿತಿಯು ಬಾಹ್ಯ ಕಾನೂನುಸಂಸ್ಥೆಯನ್ನು ನೇಮಿಸಿದೆ ಎಂದು ಕಂಪೆನಿಯು ತಿಳಿಸಿದೆ. ತನಿಖೆಯಲ್ಲಿ ಪತ್ತೆಯಾದ ವಿಷಯಗಳನ್ನು , ಎಲ್ಲಾ ಸಂಬಂಧಪಟ್ಟವರೊಂದಿಗೆ ಹಂಚಿಕೊಳ್ಳುವುದಾಗಿ ಇನ್ಫೋಸಿಸ್ ತಿಳಿಸಿದೆ.
ಇನ್ಫೋಸಿಸ್ ವರಿಷ್ಠ ಪಾರೇಖ್ ಅವರು ಆಡಳಿತ ಮಂಡಳಿಯ ಸದಸ್ಯರಾದ ಡಿ.ಎನ್.ಪ್ರಹ್ಲಾದ್, ಡಿ.ಸುಂದರಮ್ ಹಾಗೂ ಕಿರಣ್ ಮಝುಂದಾರ್ ಶಾ ಕುರಿತು ಮಾನಹಾನಿಕರ ಹಾಗೂ ಲಿಂಗತಾರತಮ್ಯವಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು ಎಂದು ಕೆಲವು ನೌಕರು ಇನ್ಫೋಸಿಸ್‌ನ ಆಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದರು. . ತಮ್ಮ ಆರೋಪಗಳಿಗೆ ಪುರಾವೆಯಾಗಿ ತಮ್ಮ ಬಳಿ ಇಮೇಲ್‌ಗಳು ಹಾಗೂ ವಾಯ್ಸ್ ರೆಕಾರ್ಡಿಂಗ್‌ಗಳು ಇರುವುದಾಗಿ ಆರೋಪಗಳನ್ನು ಮಾಡಿದ್ದ ನೌಕರರು ಹೇಳಿಕೊಂಡಿದ್ದರು. ಇಂತಹ ಆರೋಪಗಳ ಕುರಿತು ಕಂಪೆನಿಯ ವಿತ್ತೀಯ ತಂಡವು ಅಪಮಾನಕ್ಕೊಳಗಾಗಿದೆ ಎಂದು ನಿಲೇಕಣಿ ಅಸಮಾಧಾನ ವ್ಯಕ್ತಪಡಿಸಿದ್ದರು.