ಹೈಕೋರ್ಟ್ ಆದೇಶ: ಕಬಕ ಪೇಟೆಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವು

Update: 2019-11-07 11:19 GMT

ಪುತ್ತೂರು: ಕಬಕ ಗ್ರಾಪಂ ವ್ಯಾಪ್ತಿಯ ಕಬಕ ಪೇಟೆಯಲ್ಲಿ ಅನಧಿಕೃತ ಅಂಗಡಿಗಳನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ತೆರವುಗೊಳಿಸಲಾಯಿತು.

ಸುಮಾರು 9 ಅಂಗಡಿಗಳನ್ನು ಪುತ್ತೂರು ತಹಶೀಲ್ದಾರ್, ತಾಲೂಕು ಪಂಚಾಯತ್ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.

ಕಬಕ ಪೇಟೆಯಲ್ಲಿ ಕಳೆದ 40 ವರ್ಷಗಳಿಂದ ಅನಧಿಕೃತ ಗೂಡಂಗಡಿಗಳು ಸಹಿತ ಇನ್ನಿತರ ಅಂಗಡಿಗಳು ಕಾರ್ಯಾಚರಿಸುತ್ತಿದ್ದವು ಎಂದ ಅಧಿಕಾರಿಗಳು ಇದರ ಪರಿಣಾಮ ಅಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಅಂಗಡಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕಳೆದ ಹಲವಾರು ವರ್ಷಗಳಿಂದ ಕಬಕ ಗ್ರಾಪಂನ ಸಾಮಾನ್ಯ, ಗ್ರಾಮ ಸಭೆಗಳಲ್ಲಿ ಚರ್ಚೆಗೆ ಕಾರಣವಾಗುತ್ತಾ ಬಂದಿತ್ತು. ಅಂಗಡಿಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಗ್ರಾಪಂ ವತಿಯಿಂದ ತೆರವುಗೊಳಿಸುವಂತೆ ನೋಟೀಸ್ ನೀಡಲಾಗಿತ್ತು. ಈ ನಡುವೆ ತೆರವುಗೊಳಿಸದೇ ಇರುವ ಕಾರಣ ಪ್ರಕರಣ ಹೈಕೋರ್ಟ್ ತನಕ ತಲುಪಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ಜುಲೈ 9 ರಂದು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆ ಬಳಿಕವೂ ಪಂಚಾಯತ್‌ನಿಂದ ಸಂಬಂಧಿಸಿದ ಅಂಗಡಿದಾರರಿಗೆ ನೋಟೀಸು ನೀಡಲಾಗಿತ್ತು. 
 ಅಂಗಡಿ ಮಾಲಕರು ತೆರವಿಗೆ ಸಂಬಂಧಿಸಿದ ತಡೆಯಾಜ್ಞೆಗಾಗಿ ಕೋರ್ಟ್  ಮೊರೆ ಹೋಗಿದ್ದರು. ಇದೀಗ ಪುತ್ತೂರು ತಹಶೀಲ್ದಾರ್ ನೇತೃತ್ವದಲ್ಲಿ  ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಈ ನಡುವೆ ಅಧಿಕೃತವಾಗಿ ವ್ಯಾಪಾರ ನಡೆಸುವ ಎರಡು ಅಂಗಡಿ ಮಾಲಕರು ತಮ್ಮ ವ್ಯಾಪಾರಕ್ಕಾಗಿ ಸರಕಾರಿ ಜಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ವಿಸ್ತರಣೆ ಮಾಡಿದ್ದರು. ಗುರುವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆ ತಾವೇ ಸ್ವತಃ ಅಕ್ರಮಿತ ವಿಸ್ತರಣೆ ಜಾಗವನ್ನು ತೆರವುಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜು.9 ರಂದು ಕಬಕ ಪೇಟೆಯ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕೆಂದು ಹೈಕೋರ್ಟ್ ಆದೇಶ ನಮಗೆ ಬಂದಿತ್ತು. ಈ ಹಿನ್ನಲೆಯಲ್ಲಿ ತೆರವುಗೊಳಿಸುವಂತೆ ನೊಟೀಸು ನೀಡಿ ಮೂರು ತಿಂಗಳ ಕಾಲ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಅಂಗಡಿದಾರರು ಸ್ವಯಂ ತೆರವುಗೊಳಿಸುತ್ತಾರೆಂದು ಈ ತನಕ ಕಾದಿದ್ದೆವು. ತೆರವುಗೊಳಿಸದೇ ಇರುವುದರಿಂದ ಗುರುವಾರ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗಿದೆ. ಇನ್ನೂ ಕೆಲವೊಂದು ಅಂಗಡಿಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಅವುಗಳ ಬಗ್ಗೆಯೂ ಸರ್ವೆಗೆ ಬರೆದಿದ್ದೇವೆ. ಸರ್ವೆ ಕಾರ್ಯ ನಡೆದು ಅನಧಿಕೃತವೆಂದು ಕಂಡು ಬಂದಲ್ಲಿ ಅದನ್ನೂ ತೆರವುಗೊಳಿಸಲಾಗುವುದು.

- ಆಶಾ, ಅಭಿವೃದ್ಧಿ ಅಧಿಕಾರಿ, ಕಬಕ ಗ್ರಾಪಂ

ಇಲ್ಲಿನ ಅಂಗಡಿದಾರರು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸದಂತೆ ಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ ಹೈಕೋರ್ಟ್ ನಿಂದ ಅ.25 ರಂದು ತಡೆಯಾಜ್ಞೆಯೂ ಬಂದಿತ್ತು. ತಡೆಯಾಜ್ಞೆ ಪ್ರತಿಯನ್ನು ತಹಶೀಲ್ದಾರ್, ಕಬಕ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಅಧಿಕಾರಿಗಳು, ಪೊಲೀಸರಿಗೆ ನೀಡಿದ್ದರೂ ಪ್ರತಿಯನ್ನು ಸ್ವೀಕರಿಸದೇ ಅಂಗಡಿ ಮುಂಗಟ್ಟುಗಳನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ.

-ಗಿರೀಶ್ ಮಳಿ, ನ್ಯಾಯವಾದಿ, ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News