ಸುರತ್ಕಲ್ ಕಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಸಹಭೋಜನ

Update: 2019-11-07 17:14 GMT

ಮಂಗಳೂರು, ನ.7: ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸುರತ್ಕಲ್ ಸಮೀಪದ ಕಾನದಲ್ಲಿರುವ ಪರಿಶಿಷ್ಟ ಕಾಲನಿಯಲ್ಲಿರುವ ಸುಂದರ್ ಅವರ ಮನೆಯಲ್ಲಿ ಮನೆಯವರೊಂದಿಗೆ ಹಾಗೂ ಶಾಸಕ ಡಾ.ಭರತ್ ಶೆಟ್ಟಿ ವೈ, ಪ್ರಭಾರಿ ಉದಯಕುಮಾರ್ ಶೆಟ್ಟಿ ಮತ್ತಿತರ ಬಿಜೆಪಿ ನಾಯಕರೊಂದಿಗೆ ಸಹಭೋಜನ ಮಾಡಿದರು.

ಮಾತ್ರವಲ್ಲದೆ, ಕೋಡಿಕಲ್ ಬಂಗ್ರಕೂಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರೋಡ್ ಶೋ ನಡೆಸಿ ಸ್ಥಳೀಯ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಅವರ ಪರ ಮತಯಾಚಿಸಿದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನವರ 5ವರ್ಷದ ಅಡಳಿತ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿತ್ತು. ಕಾಂಗ್ರೆಸ್ ಆಡಳಿತವಿದ್ದರೂ ಪಾಲಿಕೆಗೆ ಅನುದಾನ ಕೊಡಲಿಲ್ಲ. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಮನಪಾದ ನಗರಕ್ಕೆ ಅನುದಾನವಾಗಿ 200 ಕೋಟಿ ನೀಡಿದ್ದು ಯಡಿಯೂರಪ್ಪನವರು. ಈ ಅನುದಾನವನ್ನು ಕೂಡ ಕಾಂಗ್ರೆಸಿಗರು ಬಳಸದೆ ಸದ್ಬಳಕೆ ಮಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಅವರು ಗುರುವಾರದಂದು ಸುರತ್ಕಲ್ ಕಟ್ಲ ವಾರ್ಡ್‌ನ ಪರಿಶಿಷ್ಟರ ಕಾಲೋನಿಯ ಸುಂದರ್ ರವರ ಮನೆಯಲ್ಲಿ ಸಹಭೋಜನ ಸ್ವೀಕರಿಸಲು ಆಗಮಿಸಿದ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ನ ಆಡಳಿತದಲ್ಲಿ ಒಂದು ಬಾರಿ ತುಳಸಿ ಕಟ್ಟೆಗೆ ತೆರಿಗೆ ಹಾಕಿದ್ದನ್ನು ಜನತೆ ಮರೆಯುವಂತಿಲ್ಲ. ತುಂಬೆ ವ್ಯಾಂಟೆಡ್ ಡ್ಯಾಮ್ ಸಮಸ್ಯೆ, ಜನಸಾಮಾನ್ಯರಿಗೆ ಪ್ರಾಪರ್ಟಿ ಕಾರ್ಡ್ ಸಮಸ್ಯೆ ಹೀಗೆ ನಾನ ತರದ ಸಮಸ್ಯೆಯಲ್ಲಿ ಜನರು ಬಳಲುವಂತಾಗಿದೆ.ಅನೇಕ ಕಾನೂನು ತೊಡಕು ತಂದು ಜನ ಕಷ್ಟ ಪಡುವಂತೆ ಮಾಡಿದರು. ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆಯನ್ನು ನೀಡಿದ್ದು, ಅದರ ಅನುದಾನ ಕೂಡಾ ಸರಿಯಾಗಿ ಬಳಸುವಲ್ಲಿ ವಿಫಲವಾಯಿತು ಎಂದು ಆರೋಪಿಸಿದರು.

ಕಾಂಗ್ರೆಸ್ ಒಂದು ನೂರು ಬಾಗಿಲು: ಅಭ್ಯರ್ಥಿ ಆಯ್ಕೆಯಲ್ಲೂ ಕೂಡಾ ಕಾಂಗ್ರೆಸ್ ವಿಫಲವಾಗಿದೆ. ಹಾಗಾಗಿ ಮಂಗಳೂರು ಕಾಂಗ್ರೆಸ್ ಒಡೆದ ನೂರು ಮನೆಯಾಗಿದೆ. ಮುಂದಿನ ಆಡಳಿತವನ್ನು ಬಿಜೆಪಿಯೇ ಹಿಡಿಯಲಿದೆ ಎಂದರು. ಕಾರ್ಯಕ್ರಮದಲ್ಲಿ ಭಾಜಪ ವಿಭಾಗದ ಚುನಾವಣಾ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಂಗಳೂರು ಉತತಿರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ವೈ, ಮುಖಂಡರಾದ ಆನಂದ ಪಾಂಗಾಳ, ರಾಮಚಂದ್ರ ಬೈಕಂಪಾಡಿ, ಮಾಜಿ ಕಾರ್ಪೋರೇಟರ್ ಗುಣಶೇಖರ ಶೆಟ್ಟಿ, ಕಟ್ಲ ವಾರ್ಡ್ ಅಧ್ಯಕ್ಷ ಬಾಬುಚಂದ್ರ, ಕಾರ್ಪೋರೇಟರ್ ಅಭ್ಯರ್ಥಿ ಸರಿತಾ ಶಶಿಧರ್, ಗುಣಶೇಖರ ಶೆಟ್ಟಿ ,ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಪ್ರಾಶಸ್ತ್ಯ

ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿನ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಸುಪ್ರೀಂ ನ ಆದೇಶದಂತೆ ಕಂಪೆನಿಯಲ್ಲಿ ಶೇಕಡಾ 70 ರಷ್ಟು ರಾಜ್ಯದವರಿಗೂ ಹಾಗೂ ಶೇಕಡಾ 30 ರಷ್ಟು ಹೊರರಾಜ್ಯದವರಿಗೂ ಪ್ರಾಶಸ್ತ್ಯ ನೀಡಬೇಕೆಂದು ಆದೇಶವಾಗಿದೆ. ಸ್ಥಳೀಯರಿಗೆ ಪ್ರಾಶಸ್ತ್ಯ ನೀಡುವ ಕುರಿತು ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದ್ದು ಸದ್ಯದಲ್ಲೇ ಅಧಿಕಾರಿಗಳ ಸಭೆ ಕೆಯಲಾಗುವುದು ಎಂದು ನುಡಿದರು.

2020 ಕ್ಕೆ ವಸತಿ ಯೋಜನೆ ಸಂಪೂರ್ಣ ಅನುಷ್ಠಾನ

ಕೇಂದ್ರ ಸರಕಾರದ ಯೋಜನೆಯಂತೆ 2020 ಕ್ಕೆ ಪ್ರತಿಯೊಬ್ಬರಿಗೂ ಸೂರು ಈ ಯೋಜನೆಯನ್ವಯ ನಗರ ಪ್ರದೇಶದಲ್ಲೂ ಕೂಡಾ ವಸತಿ ಸಮುಚ್ಚಯದ ಮೂಲಕ ವಸತಿ ರಹಿತರಿಗೆ ಮನೆ ಒದಗಿಸಲಾಗುವುದು ಎಂದರು.

ಸುರತ್ಕಲ್ ಟೋಲ್ ವಿಲೀನ ಅಥವಾ ರದ್ದು

ಸುರತ್ಕಲ್ ಎನ್.ಐ.ಟಿ.ಕೆ ಯ ಟೋಲ್ ನ ಪ್ರಶ್ನೆಗೆ ಉತ್ತರಿಸಿದ ಅವರು ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿಯ ಟೋಲ್ ನೊಂದಿಗೆ ವಿಲೀನ ಮಾಡಬೇಕು ಇಲ್ಲವೇ ರದ್ದು ಮಾಡಬೇಕಾಗಿರುವ ಕುರಿತು ಕಾನೂನಲ್ಲಿ ಕೆಲವು ತೊಡಕುಗಳಿದ್ದು ಹೆಜಮಾಡಿ ಟೋಲ್ ಕೇಂದ್ರ ಖಾಸಗಿ ಸಹಭಾಗಿತ್ವದ ಕೇಂದ್ರವಾಗಿದ್ದು ಪ್ರಸ್ತುತ ಎನ್‌ಐಟಿಕೆ ಟೋಲ್ ಕೇಂದ್ರವು ಕೇಂದ್ರ ಸರಕಾರದ ಅಧೀನವಾಗಿದ್ದು ಇದು ಇರ್ಕಾನ್ ಸಂಸ್ಥೆಯ ಅಧೀನದಲ್ಲಿದೆ. ಇದನ್ನು ವಿಲೀನಗೊಳಿಸಲು ಕೆಲವೊಂದು ಕಾನೂನಿನ ತೊಡಕುಗಳಿದ್ದು ಇದರ ನಿವಾರಣೆಗೆ ಕೇಂದ್ರ ಭೂ ಸಾರಿಗೆ ಸಚಿವರಿಗೆ ಪತ್ರವನ್ನು ಬರೆದಿದ್ದು ಟೋಲ್ ವಿಲೀನ ಇಲ್ಲವೇ ರದ್ದು ಮಾಡಲಾಗುವುದು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News