ಮನಪಾ ಚುನಾವಣೆ: ಬಿರುಸು ಪಡೆದ ಪ್ರಚಾರ; ಅಖಾಡಕ್ಕಿಳಿದ ಪಕ್ಷಗಳ ನಾಯಕರು

Update: 2019-11-07 17:17 GMT

ಮಂಗಳೂರು, ನ.7: ಸ್ಮಾರ್ಟ್ ಸಿಟಿಯ ಹೊಸ್ತಿಲಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ರಂಗ ಈ ಬಾರಿ ಎಲ್ಲಾ ಪಕ್ಷಗಳ ಪಾಲಿಗೂ ಪ್ರತಿಷ್ಠೆಯ ಕಣವಾಗಿವೆ. ಇನ್ನೇನು ಚುನಾವಣೆಗೆ ನಾಲ್ಕು ದಿನಗಳು ಮಾತ್ರ ಇರುವಂತೆಯೇ ಕಾಂಗ್ರೆಸ್, ಬಿಜೆಪಿ ಪಕ್ಷಗಳ ರಾಜ್ಯ ಮಟ್ಟದ ನಾಯಕರು ಕೂಡಾ ವಾರ್ಡ್ ಮಟ್ಟದಲ್ಲಿ ಅಭ್ಯರ್ಥಿಗಳ ಜತೆ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಮನಪಾದಲ್ಲಿ ಈ ಹಿಂದೆ ಆಡಳಿತಲ್ಲಿದ್ದ ಕಾಂಗ್ರೆಸ್‌ಗೆ ಈ ಚುನಾವಣೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಇದೇ ವೇಳೆ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಗೂ ಇದು ಪ್ರತಿಷ್ಠೆಯ ವಿಷಯವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಇದು ಮಹತ್ವದ ಚುನಾವಣೆ. ನಳಿನ್ ಗುರುವಾರದಿಂದ ಮಂಗಳೂರಿನಲ್ಲಿ ಚುನಾವಣಾ ಕಣಕ್ಕಿಳಿದು, ಭರ್ಜರಿ ಪ್ರಚಾರವನ್ನೇ ಆರಂಭಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ನಡೆದ ಆರು ಚುನಾವಣೆಗಳಲ್ಲಿ ಐದರಲ್ಲಿ ಜಯಗಳಿಸಿರುವ ಕಾಂಗ್ರೆಸ್ ಕೂಡಾ ಈ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇನೆಂಬ ಹಠದೊಂದಿಗೆ ರಾಷ್ಟ್ರ, ರಾಜ್ಯ ಮಟ್ಟದ ನಾಯಕರಿಂದ ಪ್ರಚಾರ, ಪ್ರಕ್ರಿಯೆಯಲ್ಲಿ ನಿರತವಾಗಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರೇ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮತದಾರರಿಗೆ ಆಶ್ವಾಸನೆಯ ಜತೆಗೆ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಬುಧವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಸಂದರ್ಭ ಕಚೇರಿ ಸಮೀಪದ ಮಾರುಕಟ್ಟೆ ಬಳಿ ಪಕ್ಷದ ಪರ ಮತಯಾಚಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಕೂಡಾ ನಿನ್ನೆ ವೀಕ್ಷಕರನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದ್ದಾರೆ.

ಇದಲ್ಲದೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಇಂದು ಬೆಳಗ್ಗೆಯಿಂದ ಇಡ್ಯಾ, ಸುರತ್ಕಲ್, ಬಂದರು, ಕುದ್ರೋಳಿ, ಬೋಳಾರ ವಾರ್ಡ್‌ಗಳಲ್ಲಿ ಮತ ಯಾಚಿಸಿದರು. ಮಾಜಿ ಸಚಿವ ರಮಾನಾಥ ರೈ ಕೂಡಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಕೂಡಾ ಈಗಾಗಲೇ ಕೆಲ ವಾರ್ಡ್‌ಗಳಲ್ಲಿ ಮತಯಾಚಿಸಿದ್ದಾರೆ.  ಇದಲ್ಲದೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕರಾದ ಜೆ.ಆರ್. ಲೋಬೋ, ಮೊಯ್ದೀನ್ ಬಾವಾ ಬಿರುಸಿನ ಮತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಐವನ್ ಡಿಸೋಜಾ ಅವರು, ಜಪ್ಪಿನಮೊಗರು, ಆಡಂಕುದ್ರು, ಕಂಕನಾಡಿ ಗರೊಡಿ, ಬಂದರು ಮೊದಲಾದ ಕಡೆ ಇಂದು ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರೇ ಖುದ್ದು ವಾರ್ಡ್ ವಾರ್ಡ್‌ಗಳಿಗೆ ಭೇಟಿ ನೀಡಿ ಮತದಾರರನ್ನು ಒಲಿಸಲೆತ್ನಿಸುತ್ತಿದ್ದಾರೆ. ಅವರು ಇಂದು ಇಡ್ಯಾ, ಹೊಸಬೆಟ್ಟು, ಬೈಕಂಪಾಡಿ ಮೊದಲಾದ ವಾರ್ಡ್‌ಗಳಲ್ಲಿ ಮನೆ, ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಇದಲ್ಲದೆ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಕಳೆದ ಕೆಲವು ದಿನಗಳಲ್ಲಿ ಬಿರುಸಿನ ಮತಯಾಚನೆ ನಡೆಸುತ್ತಿದ್ದಾರೆ.

ಮಧ್ಯಾಹ್ನದ ಬಳಿಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೂಡಾ ಸುರತ್ಕಲ್‌ನಲ್ಲಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡರು. ಇದಲ್ಲದೆ, ಬಜಾಲ್‌ನಲ್ಲಿ ಕಣಕ್ಕಿಳಿದಿರುವ ಸಿಪಿಎಂ ಪಕ್ಷದ ಪರ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ಜಿಲ್ಲಾ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಎಸ್‌ಡಿಪಿಐ, ಕರ್ನಾಟಕ ರಾಷ್ಟ್ರ ಸಮಿತಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಕೂಡಾ ಬಿರುಸಿನ ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರವನ್ನು ಮುಂದಿಟ್ಟು ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ನಾಯಕರು ಮತ ಯಾಚಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ನಿನ್ನೆ ಬಿಡುಗಡೆಗೊಳಿಸಲಾದ ಪ್ರಣಾಳಿಕೆಯ ಪ್ರತಿಗಳನ್ನು ಹಂಚುವ ಮೂಲಕ ಇದೀಗ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ-ಶಾಸಕ ಸಂಜೀವ ಮಠಂದೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ-ವಿ.ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಪಾಲಿಗೂ ಇದು ಮಹತ್ವದ ಚುನಾವಣೆಯಾಗಿದ್ದು ಒಟ್ಟಿನಲ್ಲಿ ವುತದಾರರಲ್ಲಿ ಕುತೂಹಲ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News