ಸರಕಾರವೀಗ ಓಡಲು ಆರಂಭಿಸಿದೆ: ಸಂಸದ ನಳಿನ್ ಕುಮಾರ್

Update: 2019-11-08 07:11 GMT

ಮಂಗಳೂರು, ನ.8: ಕಳೆದ ಒಂದೂವರೆ ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ಕುಂಟುತ್ತಾ ಮಲಗಿದ್ದ ರಾಜ್ಯ ಸರಕಾರ ಇದೀಗ ಓಡಲು ಆರಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ‘ನೂರು ದಿನ ನೂರು ಸಾಧನೆ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಹಲವು ಸವಾಲುಗಳ ಮಧ್ಯೆಯೇ ನೆರೆ ಹಾಗೂ ಬರ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಸಮರ್ಥವಾಗಿ ಎದುರಿಸಿದೆ. 22 ಜಿಲ್ಲೆಗಳ 103 ತಾಲೂಕುಗಳು ಈ ಬಾರಿ ಪ್ರವಾಹ ಪೀಡಿತವಾಗಿದ್ದು, ಮಧ್ಯಂತರ ಪರಿಹಾರವಾಗಿ ಕೇಂದ್ರ ಸರಕಾರ 1200 ಕೋಟಿ ರೂ.ಗಳನ್ನು ನೀಡಿದೆ. ರಾಜ್ಯ ಸರಕಾರ ತಕ್ಷಣ ಸ್ಪಂದನೆ ನೀಡಿ ಸಂತ್ರಸ್ತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ಹಣ ಒದಗಿಸುವಂತೆ ಮಾಡಿದೆ. ಮಾತ್ರವಲ್ಲದೆ, ಮನೆ ಕಳೆದುಕೊಂಡವರಿಗೆ ಮನೆ, ಜಾಗದ ವ್ಯವಸ್ಥೆ ಹಾಗೂ ತಾತ್ಕಾಲಿಕ ಬಾಡಿಗೆ ಮನೆ ಬಾಡಿಗೆ ಹಣದ ವ್ಯವಸ್ಥೆಯನ್ನೂ ಮಾಡಿದೆ ಎಂದವರು ಹೇಳಿದರು.

ಮಂಗಳೂರು ನಗರದಲ್ಲಿ ಕಾಂಕ್ರಿಟೀಕರಣ ಆಗಿದ್ದು ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರಕಾರದ ಅನುದಾನದಿಂದ. ನಗರ ಸುಂದರ ಆಗಿದ್ದರೆ ಅದಕ್ಕೆ ಯಡಿಯೂರಪ್ಪ ಕಾರಣ. ಅವರ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ನಗರಕ್ಕೆ ದೊರಕಿದೆ. ಕಮಿಷನರೇಟ್ ಕಚೇರಿ, ಮಿನಿ ವಿಧಾನಸೌಧ, ಲೇಡಿಗೋಶನ್ ಆಸ್ಪತ್ರೆ ಮೇಲ್ದರ್ಜೆಗೆ ಮೊದಲಾದ ಕಾಮಗಾರಿಗಳು ಆ ಅವಧಿಯಲ್ಲಿ ನಡೆದಿರುವಂತದ್ದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಈಗಿನ ಉಪರಾಷ್ಟ್ರಪತಿಯವರು ಹಿಂದೆ ಕೇಂದ್ರ ಸಚಿವರಾಗಿದ್ದಾಗ ಸ್ಮಾರ್ಟ್ ಸಿಟಿ ಹಾಗೂ ಅಮೃತ್ ಯೋಜನೆಯನ್ನು ನಗರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದರಿಂದ ರಸ್ತೆಗಳ ಅಗಲೀಕರಣ, ಟವರ್ ಕ್ಲಾಕ್ ಎದ್ದು ನಿಂತಿದೆ ಎಂದು ಸಂಸದ ನಳಿನ್  ತಿಳಿಸಿದರು.

ಈ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಿರುವುದಾಗಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆಯೂ ನಿದ್ದೆಯಲ್ಲಿದ್ದರು, ಈಗಲೂ ನಿದ್ದೆಯಲ್ಲಿದ್ದಾರೆ. ಅವರು ಕಣ್ಣು ತೆರೆದು ನೋಡಲಿ ಎಂದರು.

ನಗರ ಪಾಲಿಕೆಯಲ್ಲಿ ನೀರಿನ ದರ ಹೆಚ್ಚಳದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಒಂದು ಸಂದರ್ಭದಲ್ಲಿ ತುಳಸಿಕಟ್ಟೆಗೆ ತೆರಿಗೆ, ಮೂಡದಲ್ಲಿ ಕಾನೂನು ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿರುವುದು ಕೂಡಾ ಕಾಂಗ್ರೆಸ್ ಸರಕಾರ. ಆಡಳಿತ ಬಂದರೆ ಎಲ್ಲದಕ್ಕೂ ಉತ್ತರ ನೀಡಲಿದ್ದೇವೆ ಎಂದರು.

ಅಪರೇಶನ್ ಕಮಲದ ಕುರಿತಂತೆ ಯಡಿಯೂರಪ್ಪನವರ ಆಡಿಯೋ ಲೀಕ್ ಕುರಿತಂತೆ ಪಕ್ಷದಿಂದ ಆಂತರಿಕ ತನಿಖೆ ನಡೆಸಲಾಗುವುದೇ ಎಂಬ ಪ್ರಶ್ನೆಗೆ, ಆರಂಭದಲ್ಲಿ ಮೌನ ವಹಿಸಿದ ರಾಜ್ಯಾಧ್ಯಕ್ಷ ನಳಿನ್, ಬಳಿಕ ಮತ್ತೆ ಪ್ರಶ್ನಿಸಿದಾಗ, ಈ ಬಗ್ಗೆ ಹಿಂದೆಯೇ ಉತ್ತರಿಸಿದ್ದೇನೆ. ಆ ಆಡಿಯೋ ಲೀಕ್ ಪಕ್ಷದ ಕಾರ್ಯಕರ್ತರು ಮಾಡಿದ್ದಲ್ಲ. ಬಾಕಿ ಉಳಿದ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಯೋಗೀಶ್ ಭಟ್, ನಾಯಕರಾದ ಜಿತೇಂದ್ರ ಕೊಟ್ಟಾರಿ, ಉದಯ ಕುಮಾರ್ ಶೆಟ್ಟಿ, ರವಿಶಂಕರ್ ಮಿಜಾರು, ಕಿಶೋರ್ ರೈ, ಭಾಸ್ಕರ ಚಂದ್ರ ಶೆಟ್ಟಿ, ಸಂಜಯ್ ಪ್ರಭು, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News