ಸಿಎಪಿಎಫ್ ಸಿಬ್ಬಂದಿಗೆ 100 ದಿನಗಳ ಕುಟುಂಬ ಸಾಂಗತ್ಯ: ಶಾ ಆದೇಶ ಜಾರಿಗೊಳಿಸಲು ಸಮಿತಿ ರಚನೆ

Update: 2019-11-08 14:55 GMT

ಹೊಸದಿಲ್ಲಿ,ನ.8: ಸುಮಾರು ಏಳು ಲಕ್ಷದಷ್ಟಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳಾದರೂ ತಮ್ಮ ಕುಟುಂಬದೊಂದಿಗೆ ಕಳೆಯುವ ಅವಕಾಶ ಸಿಗಬೇಕು ಎಂಬ ಗೃಹಸಚಿವ ಅಮಿತ್ ಶಾ ಅವರ ಆದೇಶವನ್ನು ಜಾರಿಗೊಳಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ಕೇಂದ್ರವು ರಚಿಸಿದೆ.

ಸಿಆರ್‌ಪಿಎಫ್‌ನ ಹೆಚ್ಚುವರಿ ಮಹಾ ನಿರ್ದೇಶಕ ಅತುಲ್ ಕರ್ವಾಲ್ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚನೆಯ ಕುರಿತು ಗುರುವಾರ ಅಧಿಸೂಚನೆಯನ್ನು ಹೊರಡಿಸಲಾಗಿದ್ದು,ನಾಲ್ಕು ವಾರಗಳಲ್ಲಿ ತನ್ನ ಶಿಫಾರಸುಗಳನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಸಮಿತಿಯು ಎಲ್ಲ ಸಿಎಪಿಎಫ್ ಪಡೆಗಳ ತಲಾ ಓರ್ವ ಅಧಿಕಾರಿಯನ್ನು ಒಳಗೊಂಡಿದೆ.

ಬೃಹತ್ ಸಿಬ್ಬಂದಿ ನಿಯೋಜನೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವಂತೆ ಮತ್ತು ಸುಮಾರು ಏಳು ಲಕ್ಷ ಸಿಬ್ಬಂದಿ ವರ್ಷದಲ್ಲಿ ಕನಿಷ್ಠ ನೂರು ದಿನಗಳನ್ನಾದರೂ ತಮ್ಮ ಕುಟುಂಬಗಳೊಂದಿಗೆ ಕಳೆಯುವುದನ್ನು ಸಾಧ್ಯವಾಗಿಸುವಂತೆ ಶಾ ಕಳೆದ ತಿಂಗಳು ಸಿಎಪಿಎಫ್‌ಗಳಿಗೆ ನಿರ್ದೇಶ ನೀಡಿದ್ದರು.

ಸಚಿವಾಲಯದಡಿ ಸಿಎಪಿಎಫ್‌ಗಳ ಕಾರ್ಯನಿರ್ವಹಣೆಯ ಕುರಿತು ಸೆಪ್ಟೆಂಬರ್‌ನಲ್ಲಿ ಶಾ ಅವರಿಗೆ ವರದಿಯೊಂದನು ಸಲ್ಲಿಸಲಾಗಿದ್ದು,ಈ ಪಡೆಗಳಲ್ಲಿಯ ಯೋಧರ ನಿಯೋಜನೆ ವಿವರಗಳನ್ನು ಗಣಕೀಕರಿಸುವಂತೆ ಅವರು ನಿರ್ದೇಶ ನೀಡಿದ್ದರು.

ಸಿಆರ್‌ಇಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಸಶಸ್ತ್ರ ಸೀಮಾ ಬಲ್ ಮತ್ತು ಅಸ್ಸಾಂ ರೈಫಲ್ಸ್ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸೇರಿವೆ.

ಯೋಜನೆಯು ಜಾರಿಗೊಂಡ ಬಳಿಕ ಯೋಧರನ್ನು ಅವರ ಹುಟ್ಟೂರು ಅಥವಾ ಅವರ ಕುಟುಂಬ ವಾಸವಾಗಿರುವ ಊರಿಗೆ ಸಮೀಪದ ಘಟಕಗಳಲ್ಲಿ ನಿಯೋಜಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News