ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ತೀರ್ಪು: ರಾಜಕಾರಣಿಗಳು ಪ್ರತಿಕ್ರಿಯಿಸಿದ್ದು ಹೀಗೆ...

Update: 2019-11-09 11:03 GMT

ಹೊಸದಿಲ್ಲಿ, ನ.9: ದಶಕಗಳ ಹಳೆಯ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಶನಿವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್‌ನ ನಿರ್ಧಾರದ ಬಳಿಕ ಎಲ್ಲ ಪಕ್ಷಗಳ ಪ್ರಮುಖ ನಾಯಕರು ಅಯೋಧ್ಯೆ ಕುರಿತ ತೀರ್ಪನ್ನು ಸ್ವಾಗತಿಸಿದ್ದಾರೆ. ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.

‘‘ಅಯೋಧ್ಯೆಕ್ಕೆ ಸಂಬಂಧಿಸಿದ ತೀರ್ಪು ಐತಿಹಾಸಿಕ. ಈ ತೀರ್ಪು ದೇಶದ ಸಾಮಾಜಿಕ ಸಾಮರಸ್ಯವನ್ನು ಗಟ್ಟಿಗೊಳಿಸಿದೆ. ಎಲ್ಲರೂ ಈ ತೀರ್ಪನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಪ್ರಮುಖ ತೀರ್ಪಿಗೆ ಸಂಬಂಧಿಸಿ ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳಬೇಕು’’ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

''ಸುಪ್ರೀಂಕೋರ್ಟ್‌ನ ಆದೇಶ ಒಂದು ಮೈಲುಗಲ್ಲು ಎಂದು ಸಾಬೀತಾಗಿದೆ. ಇದು ಭಾರತದ ಒಗ್ಗಟ್ಟು ಹಾಗೂ ಪ್ರಾಮಾಣಿಕತೆೆಯನ್ನು ಬಲಿಷ್ಠವಾಗಿಸಿದೆ. ಎಲ್ಲ ಸಮುದಾಯದವರು ಹಾಗೂ ಧರ್ಮದವರು ಉಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು. ಏಕ ಭಾರತ-ಶ್ರೇಷ್ಠ ಭಾರತಕ್ಕೆ ಎಲ್ಲರೂ ಬದ್ಧರಾಗಿರಬೇಕು’’ ಎಂದು ಗೃಹ ಸಚಿವ ಅಮಿತ್ ಶಾ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣದ ಪರವಾಗಿದೆ ಎಂದು ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಾ, ‘‘ಅಯೋಧ್ಯೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಈ ತೀರ್ಪಿನೊಂದಿಗೆ ದಶಕಗಳ ಕಾಲದ ವಿವಾದ ಅಂತ್ಯವಾಗಿದೆ. ನಾವು ಶಾಂತಿ ಹಾಗೂ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು'' ಎಂದರು.

''ಸುಪ್ರೀಂಕೋರ್ಟ್‌ನ ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕು. ಇದು ಸಾಮಾಜಿಕ ಸಾಮರಸ್ಯಕ್ಕೆ ಲಾಭದಾಯಕವಾಗಿದೆ. ಈ ವಿಚಾರದ ಬಗ್ಗೆ ಮತ್ತೆ ವಿವಾದ ಇರಬಾರದು. ಇದು ನಾನು ಜನರಿಗೆ ಮಾಡುವ ಮನವಿಯಾಗಿದೆ'' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

‘‘ಸೂಕ್ಷ್ಮವಾಗಿರುವ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ ನ ತೀರ್ಪನ್ನು ರಾಜ್ಯದ ಜನತೆ ತುಂಬು ಹೃದಯದಿಂದ ಸ್ವಾಗತಿಸಬೇಕು’’ ಎಂದು ಮನವಿ ಮಾಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಯಾರೂ ಕೂಡ ಭಾವೋದ್ವೇಗದಿಂದ ಪ್ರತಿಕ್ರಿಯೆ ನೀಡಬಾರದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News