ಕಾಡ್ಗಿಚ್ಚಿಗೆ ಇಬ್ಬರು ಬಲಿ; 150 ಮನೆ ನಾಶ

Update: 2019-11-09 15:43 GMT

ಸಿಡ್ನಿ, ನ.9: ಪೂರ್ವ ಆಸ್ಟ್ರೇಲಿಯಾದಲ್ಲಿ ವಿನಾಶಕಾರಿ ಕಾಡ್ಗಿಚ್ಚು ಕನಿಷ್ಟ ಇಬ್ಬರನ್ನು ಬಲಿ ಪಡೆದಿದ್ದು ಸಾವಿರಾರು ಜನ ಮನೆಯನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಕನಿಷ್ಟ 150 ಮನೆ ನಾಶವಾಗಿದೆ . 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅಗ್ನಿಶಾಮಕ ಪಡೆಗಳು ಬಾಧಿತ ಪ್ರದೇಶವನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಹಸಿರಿನಿಂದ ಕಂಗೊಳಿಸುವ ಕರಾವಳಿ ನಗರವಾದ ಫಾರ್ಸ್ಟರ್ ನಗರ ಸಹಿತ 12 ನಗರಗಳು ಹೊಗೆಯಿಂದ ಆವೃತವಾಗಿದ್ದು ಹೆಲಿಕಾಪ್ಟರ್ ನೆರವಿನಿಂದ ನೀರನ್ನು ಚಿಮುಕಿಸಿ ಬೆಂಕಿಯನ್ನು ನಿಯಂತ್ರಿಸಲು ರಕ್ಷಣಾ ಕಾರ್ಯಕರ್ತರು ಮತ್ತು ಅಗ್ನಿಶಾಮಕ ಪಡೆಯ 1,300 ಸಿಬಂದಿಗಳು ಹೆಣಗುತ್ತಿದ್ದಾರೆ. ಸುಮಾರು 1000 ಕಿ.ಮೀ(600 ಮೈಲು) ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಗೆ ವ್ಯಾಪಿಸಿದೆ. ಕನಿಷ್ಟ 150 ಮನೆಗಳು ನಾಶವಾಗಿದ್ದರೆ ಹಲವು ಶಾಲೆಗಳು ಭಸ್ಮವಾಗಿವೆ. ಬಂಧನಾ ಕೇಂದ್ರದಲ್ಲಿರುವವರನ್ನು ಹಾಗೂ ವೃದ್ಧರ ಆಶ್ರಮದಲ್ಲಿರುವ ಜನರನ್ನು ಸ್ಥಳಾಂತರಿಸಲಾಗಿದೆ.

ಸುಮಾರು 100ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗತ್ಯಬಿದ್ದರೆ ಸೇನೆಯ ನೆರವು ಒದಗಿಸಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಹವಾಮಾನ ಬದಲಾವಣೆಯಿಂದ ಪ್ರಾಕೃತಿಕ ವಿಪತ್ತು ಸಂಭವಿಸಬಹುದು ಎಂಬ ಎಚ್ಚರಿಕೆಯನ್ನು ಇತ್ತೀಚೆಗೆ ಪ್ರಧಾನಿ ಮಾರಿಸನ್ ತಳ್ಳಿಹಾಕಿದ್ದರು. ಈ ಕುರಿತು ವರದಿಗಾರರ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಈಗ ಏನಿದ್ದರೂ ಬೆಂಕಿಯ ಹಾವಳಿಯಿಂದ ಪ್ರಾಣ ಕಳೆದುಕೊಂಡವರ ಮತ್ತು ಮನೆ ಕಳೆದುಕೊಂಡವರ ಕುಟುಂಬದವರ ಬಗ್ಗೆ ಚಿಂತಿಸೋಣ. ಈ ಹಿಂದೆಯೂ ಆಸ್ಟ್ರೇಲಿಯನ್ನರು ವಿನಾಶಕಾರಿ ಕಾಡ್ಗಿಚ್ಚಿನ ವಿರುದ್ಧ ಹೋರಾಡಿದ್ದಾರೆ. ಇದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.

ಸಮೀಪದ ನಗರಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಹಲವರು ಸ್ವಯಂಪ್ರೇರಿತರಾಗಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಬೆಂಕಿಯಲ್ಲಿ ಸುಟ್ಟುಹೋದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ ಎಂದು ತುರ್ತು ಪರಿಸ್ಥಿತಿ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News