ದಲಾಯಿ ಲಾಮಾ ಉತ್ತರಾಧಿಕಾರಿಯನ್ನು ವಿಶ್ವಸಂಸ್ಥೆ ಆಯ್ಕೆಮಾಡಲಿ: ಅಮೆರಿಕ ಒತ್ತಾಯ

Update: 2019-11-09 17:43 GMT
PTI

ವಾಷಿಂಗ್ಟನ್, ನ.9: ಟಿಬೆಟ್‌ನ ಧಾರ್ಮಿಕ ಮುಖಂಡ ದಲಾಯಿ ಲಾಮಾರ ಉತ್ತರಾಧಿಕಾರಿಯನ್ನು ವಿಶ್ವಸಂಸ್ಥೆ ಆಯ್ಕೆ ಮಾಡಬೇಕು ಎಂದು ಅಮೆರಿಕ ಒತ್ತಾಯಿಸಿದ್ದು, ಈ ಮೂಲಕ ತನ್ನ ಕೈಗೊಂಬೆಯನ್ನು ದಲೈಲಾಮಾ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಚೀನಾದ ಪ್ರಯತ್ನವನ್ನು ವಿರೋಧಿಸಿದೆ.

ಈಗ ದೇಶಭ್ರಷ್ಟರಾಗಿ ಭಾರತದಲ್ಲಿರುವ ದಲಾಯಿ ಲಾಮಾರನ್ನು ಕಳೆದ ವಾರ ತಾನು ಧರ್ಮಶಾಲದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭ ಉತ್ತರಾಧಿಕಾರಿ ವಿಷಯದ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದೇವೆ ಎಂದು ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ವಿಭಾಗದ ವಿಶೇಷ ರಾಯಭಾರಿ ಸ್ಯಾಮ್ ಬ್ರೌನ್‌ಬ್ಯಾಕ್ ಹೇಳಿದ್ದಾರೆ.

ದಲೈಲಾಮಾರ ಉತ್ತರಾಧಿಕಾರಿ ಟಿಬೆಟಿಯನ್ ಬೌದ್ಧ ಧರ್ಮಕ್ಕೆ ಸೇರಿದವರಾಗಿರಬೇಕು. ಚೀನಾ ಸರಕಾರದವರಲ್ಲ ಎಂಬುದು ಅಮೆರಿಕದ ನಿಲುವಾಗಿದ್ದು ಇದಕ್ಕೆ ಅಂತರಾಷ್ಟ್ರೀಯ ಸಮುದಾಯದ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಈ ವಿಷಯವನ್ನು ವಿಶ್ವಸಂಸ್ಥೆ ಗಮನಿಸುವ ನಿರೀಕ್ಷೆಯಿದೆ ಎಂದು ದಲೈಲಾಮಾರಿಗೆ ತಿಳಿಸಿರುವುದಾಗಿ ಬ್ರೌನ್‌ಬ್ಯಾಕ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ವೀಟೊ ಅಧಿಕಾರ ಹೊಂದಿರುವ ಚೀನಾ , ದಲೈಲಾಮ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನವನ್ನೂ ತಡೆಯಲು ಕಠಿಣ ಪ್ರಯತ್ನ ನಡೆಸುವುದರಲ್ಲಿ ಸಂಶಯವಿಲ್ಲ. ಆದರೆ ಇತರ ರಾಷ್ಟ್ರಗಳು ಕನಿಷ್ಟ ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಬೇಕು ಎಂಬುದು ಅಮೆರಿಕದ ಆಶಯವಾಗಿದೆ. ಇದೊಂದು ಜಾಗತಿಕ ಪರಿಣಾಮ ಬೀರುವ ಜಾಗತಿಕ ವಿಷಯವಾಗಿರುವುದರಿಂದ ಈ ಕುರಿತು ಶೀಘ್ರವೇ ಜಾಗತಿಕ ಸಮಾವೇಶ ನಡೆಯಬೇಕಿದೆ. ಈ ಮಹಾತ್ಕಾರ್ಯ ಮುಂದಿನ ದಿನದಲ್ಲಿ ನಡೆಯಬೇಕಿದೆ. ಚೀನಾದ ಕಮ್ಯುನಿಸ್ಟ್ ಪಕ್ಷವೂ ಈ ವಿಷಯದ ಬಗ್ಗೆ ಸಾಕಷ್ಟು ಚಿಂತನೆ ನಡೆಸಿರುವ ಬಗ್ಗೆ ಸಂಶಯವೇ ಇಲ್ಲ. ಆದ್ದರಿಂದ ನಾವು ಕೂಡಾ ಈ ವಿಷಯದ ಬಗ್ಗೆ ಯೋಜನೆಯನ್ನು ರೂಪಿಸಿ ಮುಂದುವರಿಯಬೇಕಿದೆ ಎಂದು ಬ್ರೌನ್‌ಬ್ಯಾಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News