ಸಿಖ್ಖರಿಗೆ ತೆರೆದ ಹೃದಯ ಬಾಗಿಲು: ಇಮ್ರಾನ್ ಖಾನ್

Update: 2019-11-09 16:34 GMT

ಇಸ್ಲಮಾಬಾದ್, ನ.9: ಐತಿಹಾಸಿಕ ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಆರಂಭ ಪ್ರಾದೇಶಿಕ ಶಾಂತಿಗೆ ಪಾಕಿಸ್ತಾನದ ಬದ್ಧತೆಯನ್ನು ಪ್ರಮಾಣೀಕರಿಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

 ಸಿಖ್ ಧರ್ಮದ ಸಂಸ್ಥಾಪಕ ಬಾಬಾ ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ಸಂದರ್ಭ ಸಿಖ್ ಸಮುದಾಯದವರನ್ನು ಅಭಿನಂದಿಸಿದ ಇಮ್ರಾನ್ ಖಾನ್, “ಇಂದು ನಾವು ಕೇವಲ ಗಡಿಯನ್ನು ಮಾತ್ರ ತೆರೆಯುತ್ತಿಲ್ಲ, ಸಿಖ್ ಸಮುದಾಯದವರಿಗೆ ನಮ್ಮ ಹೃದಯದ ಬಾಗಿಲನ್ನೂ ತೆರೆಯುತ್ತಿದ್ದೇವೆ” ಎಂದು ಹೇಳಿದರು.

ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ನ ಉದ್ಘಾಟನೆಯ ಈ ಐತಿಹಾಸಿಕ ಸಂದರ್ಭದಲ್ಲಿ ಗಡಿಯ ಎರಡೂ ಭಾಗದಲ್ಲಿರುವ ಮತ್ತು ವಿಶ್ವದಾದ್ಯಂತದ ಸಿಖ್ ಸಮುದಾಯಕ್ಕೆ ಅಭಿನಂದನೆಗಳು. ಈ ಪ್ರದೇಶದ ಸಮೃದ್ಧಿಯ ಹಾದಿ ಮತ್ತು ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯ ಶಾಂತಿಯನ್ನು ಆಧರಿಸಿದೆ. ಪಾಕಿಸ್ತಾನ ಸರಕಾರ ತೋರಿದ ಅಭೂತಪೂರ್ವ ಸದ್ಭಾವನೆಯ ಸಂಕೇತವು ಬಾಬಾ ಗುರುನಾನಕರ ಕುರಿತು ಇರುವ ಗೌರವದ ಪ್ರತಿಫಲನವಾಗಿದೆ ಮತ್ತು ಸಿಖ್ ಸಮುದಾಯದ ಬಗ್ಗೆ ಸರಕಾರ ಹೊಂದಿರುವ ಧಾರ್ಮಿಕ ಭಾವನೆಯ ಸೂಚಕವಾಗಿದೆ. ಧರ್ಮಗಳ ನಡುವಿನ ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯು ಉಪಖಂಡದ ಜನತೆಯ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ಪಾಕಿಸ್ತಾನ ಹೊಂದಿದೆ . ಧಾರ್ಮಿಕ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಪಾವಿತ್ರತೆ ಮತ್ತು ಘನತೆಯ ಕುರಿತು ಮುಸ್ಲಿಮರಿಗೆ ಅಪಾರ ವಿವೇಚನೆಯಿದೆ ಎಂದು ಇಮ್ರಾನ್ ಖಾನ್ ಹೇಳಿದರು.

ಪಾಕಿಸ್ತಾನದ ರಾವಿ ನದಿ ದಂಡೆಯಲ್ಲಿರುವ ಕರ್ತಾರ್‌ಪುರ ಸಾಹಿಬ್ ಗುರುದ್ವಾರವು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿರುವ ಡೇರಾ ಬಾಬಾ ನಾನಕ್ ಮಂದಿರದಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ. ಈ ಎರಡೂ ಕೇಂದ್ರಗಳನ್ನು ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಸಂಪರ್ಕಿಸುತ್ತದೆ.

ಬಹು ನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನೆಯ ಅಂಗವಾಗಿ ಭಾರತ ಹಾಗೂ ಪಾಕಿಸ್ತಾನ ಗಡಿಪ್ರದೇಶದ ಎರಡೂ ಬದಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನೆಯ ದಿನವಾದ ಶನಿವಾರ(ನವೆಂಬರ್ 9) ಹಾಗೂ ಗುರುನಾನಕರ 550ನೇ ಜನ್ಮದಿನವಾದ ನವೆಂಬರ್ 12ರಂದು ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್‌ನ ಅಗತ್ಯವಿಲ್ಲ ಹಾಗೂ 20 ಡಾಲರ್ ಸೇವಾಶುಲ್ಕವನ್ನು ಈ ಎರಡು ದಿನ ಮನ್ನಾ ಮಾಡಲಾಗಿದೆ ಎಂದು ಪಾಕಿಸ್ತಾನ ಸರಕಾರ ತಿಳಿಸಿದೆ.

ಕರ್ತಾರ್‌ಪುರ ಕಾರಿಡಾರ್ ಕುರಿತು ಭಾರತ-ಪಾಕಿಸ್ತಾನ ಮಧ್ಯೆ ನಡೆದಿರುವ ಒಪ್ಪಂದದಿಂದ ಭಾರತದಿಂದ ಪ್ರತೀದಿನ 5000 ಯಾತ್ರಿಗಳು ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಅವಕಾಶ ದೊರಕಿದೆ.

ಕಾರಿಡಾರ್ ಉದ್ಘಾಟನೆಯಂದೇ ಅಯೋಧ್ಯೆ ತೀರ್ಪು

ಪಾಕ್ ಆಕ್ಷೇಪ ಇಸ್ಲಾಮಾಬಾದ್, ನ.9: ಅಯೋಧ್ಯೆ ವಿವಾದದ ತೀರ್ಪು ಪ್ರಕಟಿಸಿರುವ ದಿನಾಂಕದ ಬಗ್ಗೆ ಆಕ್ಷೇಪ ಎತ್ತಿರುವ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ, ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಯಂತಹ ಸಂಭ್ರಮದ ದಿನದಂದು ತೋರಿರುವ ಇಂತಹ ಅಸಂವೇದನಾಶೀಲತೆಯ ವರ್ತನೆಯಿಂದ ತೀವ್ರ ದುಃಖಿತನಾಗಿದ್ದೇನೆ ಎಂದಿದ್ದಾರೆ.

ಕೆಲ ದಿನ ಕಾದು ಈ ತೀರ್ಪು ಪ್ರಕಟಿಸಬಹುದಿತ್ತಲ್ಲವೇ? ಅಯೋಧ್ಯೆ ವಿವಾದ ಸೂಕ್ಷ್ಮ ವಿಷಯವಾಗಿದ್ದು ಇದರ ತೀರ್ಪನ್ನು ಕಾರಿಡಾರ್ ಉದ್ಘಾಟನೆಯ ಸಂಭ್ರಮದ ದಿನದಂದೇ ಪ್ರಕಟಿಸುವ ತುರ್ತು ಏನಿತ್ತು ? ಭಾರತದಲ್ಲಿ ಮುಸ್ಲಿಮರು ಈಗಾಗಲೇ ಸಾಕಷ್ಟು ಒತ್ತಡದಲ್ಲಿದ್ದು ಭಾರತದ ಸುಪ್ರೀಂಕೋರ್ಟ್‌ನ ಈ ನಿರ್ಧಾರ ಅವರ ಮೇಲೆ ಮತ್ತಷ್ಟು ಒತ್ತಡಕ್ಕೆ ಕಾರಣವಾಗಲಿದೆ . ಈ ತೀರ್ಪನ್ನು ವಿವರವಾಗಿ ಪರಿಶೀಲಿಸಿದ ಬಳಿಕ ಪಾಕಿಸ್ತಾನ ಪ್ರತಿಕ್ರಿಯಿಸಲಿದೆ ಎಂದು ಖುರೇಶಿ ಹೇಳಿರುವುದಾಗಿ ವರದಿಯಾಗಿದೆ.

ಇದು ಅತ್ಯಂತ ಅವಮಾನಕರ, ಅಸಹ್ಯಕರ, ಅಕ್ರಮ, ಅನೈತಿಕ ತೀರ್ಪು ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಫಾವದ್ ಹುಸೈನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News