ಕರ್ನಾಟಕದ ದಾಖಲೆ ಗೆಲುವಿನ ಓಟಕ್ಕೆ ಬರೋಡಾ ಬ್ರೇಕ್

Update: 2019-11-09 18:28 GMT

ವಿಶಾಖಪಟ್ಟಣ, ನ.9: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸತತ 15ನೇ ಗೆಲುವು ದಾಖಲಿಸಿ ರಾಷ್ಟ್ರೀಯ ದಾಖಲೆಯೊಂದನ್ನು ನಿರ್ಮಿಸಿದ್ದ ಕರ್ನಾಟಕ ತಂಡ ಶನಿವಾರ ನಡೆದ ಬರೋಡಾ ವಿರುದ್ಧ ಪಂದ್ಯವನ್ನು ಕೇವಲ 14 ರನ್‌ಗಳಿಂದ ಸೋತಿದೆ. ಈ ಸೋಲಿನೊಂದಿಗೆ ಕರ್ನಾಟಕದ ಸತತ ಗೆಲುವಿನ ಆರ್ಭಟಕ್ಕೆ ತೆರೆ ಬಿದ್ದಿದೆ.

ಶುಕ್ರವಾರ ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದ್ದ ಕರ್ನಾಟಕ ತಂಡ ಸತತವಾಗಿ ಗರಿಷ್ಠ ಟಿ-20 ಪಂದ್ಯಗಳನ್ನು ಜಯಿಸಿದ ಭಾರತದ ಮೊದಲ ತಂಡವೆಂಬ ಕೀರ್ತಿಗೆ ಭಾಜನವಾಗಿತ್ತು. ಶನಿವಾರ ‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬರೋಡಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿತ್ತು. ಆರಂಭಿಕ ಆಟಗಾರ ಹಾಗೂ ನಾಯಕ ದೇವಧರ್(52, 38 ಎಸೆತ,1 ಬೌಂಡರಿ, 4 ಸಿಕ್ಸರ್)ತಂಡದ ಉತ್ತಮ ಮೊತ್ತಕ್ಕೆ ಮಹತ್ವದ ಕಾಣಿಕೆ ನೀಡಿದರು.

ಗೆಲ್ಲಲು 197 ರನ್ ಕಠಿಣ ಸವಾಲು ಪಡೆದ ಕರ್ನಾಟಕ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿ ಕೊನೆಯ ತನಕ ಹೋರಾಟ ನೀಡಿ ಸೋಲೊಪ್ಪಿಕೊಂಡಿತು.

ಉತ್ತರಾಖಂಡ ವಿರುದ್ಧ ಪಂದ್ಯದಲ್ಲಿ ಮಿಂಚಿದ್ದ ರೋಹನ್ ಕದಮ್ ಬರೋಡಾ ವಿರುದ್ಧವೂ ಅರ್ಧಶತಕದ(57, 40 ಎಸೆತ, 7 ಬೌಂಡರಿ, 1 ಸಿಕ್ಸರ್)ಕೊಡುಗೆ ನೀಡಿದರು. ಸಿಸೋಡಿಯಾ(38) ಅವರೊಂದಿಗೆ ಮೊದಲ ವಿಕೆಟ್‌ಗೆ 53 ರನ್ ಸೇರಿಸಿ ಉತ್ತಮ ಆರಂಭವನ್ನು ಒದಗಿಸಿದರು.

 ನಾಯಕ ಕರುಣ್ ನಾಯರ್(47, 31 ಎಸೆತ, 3 ಬೌಂಡರಿ,3 ಸಿಕ್ಸರ್), ಎಸ್.ಗೋಪಾಲ್(20)ಹೊರತುಪಡಿಸಿ ಉಳಿದ ಆಟಗಾರರು ಒಂದಂಕಿಯ ಮೊತ್ತ ಗಳಿಸಲು ವಿಫಲರಾದರು. ಲುಕ್ಮನ್ ಮೇರಿವಾಲಾ(5-21)ಅತ್ಯುತ್ತಮ ಬೌಲಿಂಗ್‌ನ ಮೂಲಕ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಕರ್ನಾಟಕಕ್ಕೆ ಗೆಲುವು ನಿರಾಕರಿಸಿದರು. ಶೇಟ್(2-50)ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News