ಮಹಾರಾಷ್ಟ್ರದಲ್ಲಿ ನಾವು ಸರಕಾರ ರಚಿಸುವುದಿಲ್ಲ: ಬಿಜೆಪಿ

Update: 2019-11-10 17:55 GMT

 ಮುಂಬೈ,ನ.11: ಶಿವಸೇನೆಯ ಜೊತೆ ದಶಕಗಳ ಮೈತ್ರಿಯನ್ನು ಕಡಿದುಕೊಂಡಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಪ್ರಯತ್ನವನ್ನು ಬಿಜೆಪಿ ಕೈಬಿಟ್ಟಿದೆ. ಸರಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರ ಸಂಖ್ಯಾಬಲವನ್ನು ತನ್ನಲ್ಲಿ ಇಲ್ಲವೆಂದು ಅದು ಹೇಳಿದೆ.

  ಸರಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರು ಶನಿವಾರ ಬಿಜೆಪಿಯನ್ನು ಆಹ್ವಾನಿಸಿದ್ದರು. ಇಂದು ಫಡ್ನವೀಸ್ ಅವರು ರಾಜ್ಯಪಾಲರನ್ನು ಭೇಟಿಯಾಗಿ, ಸರಕಾರ ರಚನೆಗೆ ತನ್ನ ಪಕ್ಷವು ಹಕ್ಕು ಮಂಡಿಸುವುದಿಲ್ಲವೆಂದು ತಿಳಿಸಿದರು.

ಸರಕಾರ ರಚನೆ ಬಗ್ಗೆ ನಿರ್ಧರಿಸಲು ಬಿಜೆಪಿಯು ರವಿವಾರ ಒಂದರ ಹಿಂದೆ ಒಂದರಂತೆ ಎರಡು ಪ್ರಮುಖ ಸಮಿತಿ ಸಭೆಗಳನ್ನು ನಡೆಸಿತ್ತು. ಆದರೆ ಮೊದಲ ಸಭೆಯು ಯಾವುದೇ ನಿರ್ಧಾರಕ್ಕೆ ಬಾರದೆ ಕೊನೆಗೊಂಡಿತ್ತು.

 ಈ ಮಧ್ಯೆ ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಕೂಡಾ ಸರಕಾರ ರಚನೆಗೆ ಬೇಕಾದ ಸದಸ್ಯ ಬಲ ತಮ್ಮ ಪಕ್ಷಕ್ಕಿಲ್ಲವೆಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸರಕಾರ ರಚನೆಗಾಗಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಕೈಜೋಡಿಸಲು ಶಿವಸೇನೆ ಈಗ ಮುಕ್ತವಾಗಿದೆಯೆಂದು ಅವರು ಹೇಳಿದ್ದಾರೆ.

 ‘‘ಕಾಂಗ್ರೆಸ್ ಹಾಗೂ ಎನ್‌ಸಿಪಿ ಬೆಂಬಲದೊಂದಿಗೆ ಸರಕಾರ ರಚಿಸಲು ಶಿವಸೇನೆ ಬಯಸುವುದಾದರೆ, ಅದಕ್ಕೆ ಶುಭವಾಗಲಿ’’ ಎಂದು ಪಾಟೀಲ್ ಹೇಳಿದ್ದಾರೆ.

  ಮಹಾರಾಷ್ಟ್ರದ ಜನತೆ ನೀಡಿದ ತೀರ್ಪಿಗೆ ಶಿವಸೇನೆಯು ಅಗೌರವ ತೋರಿದೆಯೆಂದು ಅವರು ಹೇಳಿದ್ದಾರೆ.

ಸರಕಾರ ರಚನೆಯಾಗಿ 15 ದಿನಗಳಾದರೂ ಅಧಿಕಾರ ಹಂಚಿಕೆಯ ಬಗ್ಗೆ ಬಿಜೆಪಿ ಹಾಗೂ ಶಿವಸೇನೆ ನಡುವೆ ಉಂಟಾಗಿರುವ ಬಿಕ್ಕಟ್ಟು ಕೊನೆಗೊಂಡಿರಲಿಲ್ಲ. ಈ ಮಧ್ಯೆ ಬಿಜೆಪಿಯು ತಮ್ಮ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗದಂತೆ ಖಾತರಿಪಡಿಸಲು ಶಿವಸೇನಾ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರನ್ನು ವಿವಿಧ ಹೊಟೇಲ್‌ಗಳಲ್ಲಿ ಕೂಡಿ ಹಾಕಿವೆ.

  ಮುಖ್ಯಮಂತ್ರಿ ಹುದ್ದೆಯನ್ನು 50:50 ಸೂತ್ರ ಆಧಾರದಲ್ಲಿ ಹಂಚಿಕೊಳ್ಳುವುದು ಸೇರಿದಂತೆ ಸರಕಾರದಲ್ಲಿ ಅಧಿಕಾರದ ಸಮಾನ ಪಾಲು ತನಗೂ ನೀಡಬೇಕೆಂದು ಶಿವಸೇನೆ ಆಗ್ರಹಿಸುತ್ತಿದೆ. ಆದರೆ ಬಿಜೆಪಿಯು ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲು ನಿರಾಕರಿಸುತ್ತಲೇ ಬಂದಿರುವುದು, ಉಭಯ ಪಕ್ಷಗಳ ನಡುವೆ ಬಿಕ್ಕಟ್ಟು ಬಿಗಡಾಯಿಸಲು ಕಾರಣವಾಗಿದೆ.

 ಬಿಜೆಪಿ-ಶಿವಸೇನಾ ಮೈತ್ರಿಕೂಟವು ಸರಕಾರ ರಚನೆಗೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟವನ್ನು ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಆಹ್ವಾನಿಸಬೇಕೆಂದು ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಆಗ್ರಹಿಸಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯು 105 ಸ್ಥಾನಗಳನ್ನು, ಶಿವಸೇನೆಯು 56 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಪಕ್ಷ 44 ಹಾಗೂ ಎನ್‌ಸಿಪಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರಕಾರ ರಚನೆಗೆ ಬೇಕಾದ 145 ಸದಸ್ಯರ ಬೆಂಬಲದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News