ನನ್ನ ನಿಲುವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ: ಎಎಸ್‌ಐ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮುಹಮ್ಮದ್

Update: 2019-11-10 14:47 GMT

ಹೊಸದಿಲ್ಲಿ,ನ.10: ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪು ತನ್ನ ನಿಲುವನ್ನು ಸಮರ್ಥಿಸಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ)ಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮುಹಮ್ಮದ್ ಹೇಳಿದ್ದಾರೆ. ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ಉತ್ಖನನ ನಡೆಸಿದ್ದ 10 ಸದಸ್ಯರ ತಂಡದ ಭಾಗವಾಗಿದ್ದ ಮುಹಮ್ಮದ್, ಬಾಬರಿ ಮಸೀದಿಯು ತಲೆಯೆತ್ತುವ ಮೊದಲು ಅಲ್ಲಿ ಮಂದಿರವೊಂದಿತ್ತು ಎಂದು ಹೇಳಿದ್ದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಶನಿವಾರದ ತೀರ್ಪು ಅಂತಿಮವಾಗಿದ್ದು, ಅತ್ಯಂತ ಸಮತೋಲಿತವಾಗಿದೆ. ಇದಕ್ಕಿಂತ ಒಳ್ಳೆಯ ತೀರ್ಪು ಬರಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದರು.

“ಓರ್ವ ಮುಸ್ಲಿಂ ಆಗಿ ನಾನು ಸತ್ಯವನ್ನು ಹೇಳಿದ್ದಾಗ ಕೆಲವರು ನನ್ನ ವಿರುದ್ಧ ಮುಗಿಬಿದ್ದಿದ್ದರು. ಇಂದು ನನ್ನ ನಿಲುವು ಸಮರ್ಥಿಸಲ್ಪಟ್ಟಿದೆ. ವಾಸ್ತವದಲ್ಲಿ, ಸರ್ವೋಚ್ಚ ನ್ಯಾಯಾಲಯವು ಎಎಸ್‌ಐ ಸಲ್ಲಿಸಿದ್ದ ಸಾಕ್ಷ್ಯಾಧಾರಗಳು ಸರಿ ಎಂದು ಒಪ್ಪಿಕೊಂಡಿದೆ” ’ಎಂದು 2012ರಲ್ಲಿ ನಿವೃತ್ತಿಯಾಗುವ ಮುನ್ನ 24 ವರ್ಷಗಳ ಸೇವೆ ಸಲ್ಲಿಸಿದ್ದ ಮುಹಮ್ಮದ್ ತಿಳಿಸಿದರು.

1976-77ರಲ್ಲಿ ಎಎಸ್‌ಐ ತಂಡವು ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ಮೊದಲ ಬಾರಿಗೆ ಉತ್ಖನನ ನಡೆಸಿತ್ತು.

ಉತ್ಖನನದ ಸಂದರ್ಭದಲ್ಲಿ ತಾನು ಮಂದಿರದ ಅವಶೇಷಗಳನ್ನು ನೋಡಿದ್ದಾಗಿ 1990,ಡಿ.5ರಂದು ಮುಹಮ್ಮದ್ ಮೊದಲ ಬಾರಿಗೆ ಹೇಳಿದ್ದರು. ಮಸೀದಿಯನ್ನು ಮಂದಿರದ ಮೇಲೆ ಕಟ್ಟಲಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸಿದ್ದು ಮಾತ್ರವಲ್ಲ, ಮಂದಿರದ ಕೆಲವು ಅವಶೇಷಗಳನ್ನೂ ಮಸೀದಿಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿತ್ತು ಎಂದು ಮುಹಮ್ಮದ್ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News