ವಿದ್ಯಾರ್ಥಿ- ಶಿಕ್ಷಕರಲ್ಲಿ ಪಠ್ಯಕ್ರಮವನ್ನು ಮೀರಿದ ಚಿಂತನೆ ಬಹುಮುಖ್ಯ: ಪ್ರೊ. ಯಡಪಡಿತ್ತಾಯ

Update: 2019-11-11 09:07 GMT

ಮಂಗಳೂರು, ನ.11: ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿರುವ ಜತೆಯಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯ ಕ್ರಮವನ್ನು ಮೀರಿ ಚಿಂತಿಸಬೇಕಾಗುತ್ತದೆ. ಇದಕ್ಕೆ ಸುಧಾರಿತ ಕಲಿಕಾ ಕ್ರಮ ಅತ್ಯಂತ ಪೂರಕ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಎಸ್. ಯಡಪಡಿತ್ತಾಯ ಹೇಳಿದರು.

ಶಕ್ತಿನಗರದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿರುವ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಖರವಾದ ಗುರಿ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದವರು ಹೇಳಿದರು.

ಶಿಕ್ಷಣ ಸಂಸ್ಥೆಗಳು ಪದವಿಗಳನ್ನು ನೀಡುವ ಸಂಸ್ಥೆಗಳಾಗಿರುವ ಈ ಕಾಲಘಟ್ಟದಲ್ಲಿ ಇಂತಹ ಸುಧಾರಿತ ಶಿಕ್ಷಣ ಕ್ರಮಗಳು ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕೌಶಲ್ಯವನ್ನು ವೃದ್ಧಿಸುತ್ತವೆ. ಮುಂದೆ ಅವರ ಉದ್ಯೋಗ ಜೀವನದಲ್ಲಿಯೂ ಈ ಕ್ರಮಗಳು ಸಹಕಾರಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸ್ವಾಯತ್ತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳ್ಳದೆ, ಉತ್ತಮ ಮಾನವರಾಗಿ ಬೆಳೆಯಬೇಕಾಗಿದೆ. ಇದಕ್ಕೆ ಮಾನಸಿಕ ಬೆಳವಣಿಗೆ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸುಧಾರಿತ ಕಲಿಕಾ ಕ್ರಮ ಮಕ್ಕಳಲ್ಲಿ ಮನೋಸ್ಥೆರ್ಯವನ್ನು ತುಂಬುತ್ತದೆ ಎಂದರು.

ಶಕ್ತಿ ಅಡ್ವಾನ್ಸ್‌ಡ್ ಲರ್ನಿಂಗ್ ಬಗ್ಗೆ ದಿಕ್ಸೂಚಿ ಭಾಷಣ ನೀಡಿದ ಸಂಸ್ಥೆಯ ಸಂಯೋಜಕ ಡಾ. ದರ್ಶನ್ ರಾಜ್, ಇದು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿ ಸಂಶೋಧನಾತ್ಮಕ ನಿಲುವಿನೊಂದಿಗೆ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಹಕಾರಿ. ಮಾತ್ರವಲ್ಲದೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒತ್ತಡವಿಲ್ಲದೆ ಎದುರಿಸಲು ನೆರವು ನೀಡಲಿದೆ ಎಂದರು.

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಎನ್.ಎಸ್.ಒ,ಡಿ.ಎಂ.ಬಿ., ಐ.ಜಿ.ಕೆ.ಒ, ಎನ್.ಐ.ಎಂ.ಒ. ಎನ್.ಡಿ.ಎ., ಕೆ.ಎ.ಪಿ.ವೈ ಮೊದಲಾದ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಇದು ಮುಂದೆ ಐ.ಎ.ಎಸ್., ಐ.ಪಿ.ಎಸ್., ಐ.ಆರ್.ಎಸ್., ಕೆ.ಎ.ಎಸ್. ಮೊದಲಾದ ಪರೀಕ್ಷೆಗಳನ್ನು ಎದುರಿಸಲು ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳಿಗೆ ಅಡ್ಡಿಯಾಗದಂತೆ, ಪಠ್ಯ- ಪಠ್ಯೇತರ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಅವರ ಪರಿಪೂರ್ಣ ವ್ಯಕ್ತಿತ್ವ ರೂಪಿಸುವತ್ತ ಈ ವ್ಯವಸ್ಥೆಯಡಿ ಗಮನ ನೀಡಲಾಗತ್ತದೆ. ಇಂಜಿನಿಯರಿಂಗ್, ವೈದ್ಯಕೀಯ, ವ್ಯವಹಾರ, ಬ್ಯಾಂಕಿಂಗ್, ಸ್ವ ಉದ್ಯೋಗ, ಶಿಕ್ಷಣ, ರಕ್ಷಣೆ, ಕೃಷಿ ಹೀಗೆ ವಿವಿಧ ವಲಯಗಳ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಆ ಕ್ಷೇತ್ರದ ಪರಿಚಯ, ಉದ್ಯೋಗಾವಕಾಶಗಳು ಹಾಗೂ ಆ ಕ್ಷೇತ್ರಗಳಿಗೆ ಪ್ರವೇಶದ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ಡಾ. ದರ್ಶನ್ ರಾಜ್ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಯ್ಕ್ ಪಾಸ್ತಾವಿಕವಾಗಿ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಯ್ಕ್, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್., ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಗೋಪಾಲಕೃಷ್ಣ ಪ್ರಿ ಸ್ಕೂಲ್‌ನ ಸಂಯೋಜಕರಾದ ನೀಮಾ ಸಕ್ಸೀನಾ, ಬೈಕಾಡಿ ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು.

ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News