'ಬಿಜೆಪಿ ಕಾರ್ಯಕರ್ತರಿಂದ ಪೂರ್ವಯೋಜಿತ ಕೊಲೆ': ಪುತ್ರನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶ್ರೇಯಸ್ ತಾಯಿ

Update: 2019-11-11 15:00 GMT
ಶ್ರೇಯಸ್, ಪೋಷಕರು

ಉಡುಪಿ, ನ.11: "ಹೊಳೆಯಲ್ಲಿ ತೋಟೆ ಹಾಕಿ ಮೀನು ಹಿಡಿಯಲೆಂದು ಕರೆದುಕೊಂಡು ಹೋಗಿ ನನ್ನ ಮಗನನ್ನು ಕ್ರಿಮಿನಲ್ ಹಿನ್ನೆಲೆಯುಳ್ಳ ಬಿಜೆಪಿ ಕಾರ್ಯಕರ್ತರು ಪೂರ್ವಯೋಜಿತವಾಗಿ ಕೊಲೆ ಮಾಡಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಬೇಕು. ನನ್ನ ಮಗನಿಗೆ ಯಾಕೆ ಈ ರೀತಿ ಮಾಡಿದ್ದಾರೆಂದು ನನಗೆ ಗೊತ್ತಾಗಬೇಕು. ನನಗೆ ನನ್ನ ಮಗ ಬೇಕು"
ಹೀಗೆ ನ.5ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಜೆ ಹೊಸೂರು ಗ್ರಾಮದ ಹರಾವು ಸಮೀಪದ ಮಡಿಸಾಲು ಹೊಳೆಯಲ್ಲಿ ತೋಟೆ (ಸ್ಪೋಟಕ) ಹಾಕಿ ಮೀನು ಹಿಡಿಯುವ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟ ಹೊಸೂರು ಗ್ರಾಮದ ಕುರ್ಪಾಡಿಯ ಶ್ರೇಯಸ್(19) ಎಂಬವರ ತಾಯಿ ಶೋಭಾ ಇಂದು ಮಾಧ್ಯಮದವರ ಮುಂದೆ ಅತ್ತು ಕಣ್ಣೀರು ಹಾಕಿ ತಮ್ಮ ನೋವನ್ನು ಹೇಳಿಕೊಂಡರು.

"ಮಧ್ಯಾಹ್ನ 12:30ರವರೆಗೆ ಮನೆಯ ಜಗಲಿಯಲ್ಲಿ ಕುಳಿತು ಓದಿಕೊಂಡಿದ್ದ ಶ್ರೇಯಸ್‌ನನ್ನು ಕರೆದುಕೊಂಡು ಬರುವಂತೆ ಬಿಜೆಪಿ ಕಾರ್ಯಕರ್ತರಾದ ಸದಾನಂದ ಮತ್ತು ಯೋಗೀಶ್ ಫೋನ್ ಮಾಡಿ ನೆರೆಮನೆಯಲ್ಲಿರುವ ನಮ್ಮ ಸಂಬಂಧಿ ರಾಕೇಶ್‌ಗೆ ತಿಳಿಸಿದ್ದಾರೆ. ಅದರಂತೆ ರಾಕೇಶ್, ಶ್ರೇಯಸ್‌ನನ್ನು ಬಲವಂತ ಮಾಡಿ ಕರೆದುಕೊಂಡು ಹೋಗಿ ಅವರಿಗೆ ಒಪ್ಪಿಸಿದ್ದಾನೆ. ಇವರ ಮಾತನ್ನು ಸತ್ಯ ಎಂದು ನಂಬಿ ನನ್ನ ಮಗ ಹೋಗಿದ್ದಾನೆ. ಆದರೆ ಇವರು ಈ ರೀತಿ ಮೋಸ ಮಾಡುತ್ತಾರೆಂದು ಗೊತ್ತಾಗಲಿಲ್ಲ" ಎಂದು ಅವರು ದೂರಿದರು.

ಇವರು ನೇರ ಮಡಿಸಾಲು ಹೊಳೆ ಹತ್ತಿರ ಹೋಗಿದ್ದಾರೆ. ಸರಿಯಾದ ದಾರಿ ಇಲ್ಲದ ಹಾಗೂ ಯಾರು ಹೋಗದ ತುಂಬಾ ಆಳ ಇರುವ ಹೊಳೆಯ ಪ್ರದೇಶಕ್ಕೆ ಹೋಗಿದ್ದು, ಅಲ್ಲಿ ಇವರು ತೋಟೆ ಹಾಕಿ ಮೀನು ಹಿಡಿಯುತ್ತಿದ್ದರು. ಅಲ್ಲಿಯೇ ನನ್ನ ಮಗ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಗ್ರಾಮಸ್ಥರು ನೋಡುವಾಗ ಈ ಮೂವರ ಮೈ ಒದ್ದೆಯಾಗಿರಲಿಲ್ಲ. ಅಂದರೆ ನನ್ನ ಮಗ ಒಬ್ಬನೇ ನೀರಿಗೆ ಇಳಿದಿದ್ದಾನೆಯೇ ಎಂದು ಅವರು ಪ್ರಶ್ನಿಸಿದರು.

ಇದರಲ್ಲಿ ನನಗೆ ಅನುಮಾನ ಇದೆ. ಯೋಗೀಶ್ ಮತ್ತು ಸದಾನಂದ ವಿರುದ್ಧ ದರೋಡೆ ಪ್ರಕರಣ ಇದ್ದು, ಇವರು ಅಕ್ರಮವಾಗಿ ದನ, ಮರಳು, ಗಂಧದ ವ್ಯಾಪಾರ ಮಾಡುತ್ತಿದ್ದಾರೆ. ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ನನ್ನ ಮಗ ನೀರು ಕುಡಿದೇ ಇಲ್ಲ. ಅವನ ಕುತ್ತಿಗೆಯಲ್ಲಿ ಗಾಯ ಕಂಡುಬಂದಿದೆ. ಅವರೆಲ್ಲ ಸೇರಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಇಲ್ಲದಿದ್ದರೆ ತೋಟೆ ಹಾಕುವ ಕೆಲಸಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗುವ ಅಗತ್ಯವೇ ಇರಲಿಲ್ಲ ಎಂದು ಶೋಭಾ ಅಳಲು ತೋಡಿಕೊಂಡರು.

ಮನೆಯ ಹಿರಿಯ ಮಗ: ಹೊಸೂರು ಗ್ರಾಮದ ಕುರ್ಪಾಡಿಯ ಸುರೇಶ್ ಸೇರ್ವೆಗಾರ್ ಹಾಗೂ ಶೋಭಾ ದಂಪತಿಯ ಹಿರಿಯ ಮಗನಾಗಿದ್ದ ಶ್ರೇಯಸ್ ಉಡುಪಿ ಯುಪಿಎಂಸಿ ಕಾಲೇಜಿನ ಮೊದಲನೆ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದನು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶ್ರೇಯಸ್, ವಾಲಿಬಾಲ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದನು.

ತಂದೆ ಸುರೇಶ್ ಮಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ನಿರ್ವಹಿಸುತ್ತಿದ್ದು, ತಾಯಿ ಶೋಭಾ ಮನೆಯಲ್ಲೇ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಸ್ವಸ್ತಿಕ್(15) ಎಂಬಾತ ಸ್ಥಳೀಯ ಶಾಲೆಯಲ್ಲಿ 10ನೆ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ತಂದೆ ಸುರೇಶ್ ಅನಾರೋಗ್ಯ ಪೀಡಿತರಾಗಿದ್ದು, ದುಡಿಯಲು ಆಗದ ಸ್ಥಿತಿಯಲ್ಲಿ ಇದ್ದಾರೆ.

ಹೊಳೆಯಲ್ಲಿ ತೋಟೆ ಹಾಕಿ ಮೀನು ಹಿಡಿಯುವ ವೇಳೆ ಶ್ರೇಯಸ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆಂದು ತಂದೆ ಸುರೇಶ್ ಸೇರ್ವೆಗಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪೊಲೀಸರಿಂದ ಅಸಹಕಾರ: ಆರೋಪ
ಈ ವಿಚಾರವನ್ನು ಬ್ರಹ್ಮಾವರ ಎಸ್ಸೈಗೆ ಹೇಳಿದರೂ ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಎಸ್ಸೈ ಈವರೆಗೆ ನಮ್ಮ ಮನೆಗೆ ಬರಲೇ ಇಲ್ಲ. ತಾಯಿಯ ಬಳಿ ಯಾವುದೇ ಹೇಳಿಕೆ ಪಡೆದುಕೊಂಡಿಲ್ಲ ಎಂದು ಮೃತ ಶ್ರೇಯಸ್ ತಾಯಿ ಶೋಭಾ ಆರೋಪಿಸಿದರು. 

ಮಣಿಪಾಲ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಾಗ ಎಸ್ಸೈ ವೈದ್ಯರ ಜೊತೆ ಒಳಗೆಯೇ ಇದ್ದರು. ಎಸ್ಸೈಗೆ ಒಳಗೆ ಏನು ಕೆಲಸ. ಪೊಲೀಸರು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಈವರೆಗೆ ನನ್ನ ನೋವು ಕೇಳಿಲ್ಲ. ನನಗೆ ಬ್ರಹ್ಮಾವರ ಠಾಣೆಗೆ ಹೋಗಲು ಆಗುವುದಿಲ್ಲ. ಆದರೂ ಅವರು ಮನೆಗೆ ಬಂದಿಲ್ಲ. ಈಗ ನನ್ನ ಮಗ ನನಗೆ ಇಲ್ಲ. ನನ್ನಲ್ಲಿ ಉಳಿದಿರುವುದು ಕೇವಲ ಕಣ್ಣೀರು ಮಾತ್ರ. ನಮಗೆ ಹೋರಾಟ ಮಾಡುವ ಶಕ್ತಿ ಇಲ್ಲ. ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಆಳುತ್ತ ಕಣ್ಣೀರು ಹಾಕಿದರು.

ಕಾಂಗ್ರೆಸ್‌ನಿಂದ ವಾರದ ಗಡುವು: ಪ್ರತಿಭಟನೆಯ ಎಚ್ಚರಿಕೆ
ಮೃತ ಶ್ರೇಯಸ್ ಮನೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಶ್ರೇಯಸ್ ತಾಯಿ ಪ್ರಮೋದ್ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡರು. ಇದೇ ವೇಳೆ ಪಕ್ಷದ ವತಿಯಿಂದ ಕುಟುಂಬದವರಿಗೆ ಪರಿಹಾರವನ್ನು ನೀಡಲಾಯಿತು.

ಬಳಿಕ ಮಾತನಾಡಿದ ಪ್ರಮೋದ್ ಮಧ್ವರಾಜ್, ಮನೆಯವರು ಇದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ. ವಾಸ್ತಾವಿಕ ವಿಚಾರವನ್ನು ಗಮನಿಸಿದಾಗ ಶ್ರೇಯಸ್‌ನ್ನು ಕರೆದುಕೊಂಡು ಹೋದ ವ್ಯಕ್ತಿಗಳು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ. ಆಡಳಿತ ಪಕ್ಷವಾದ ಬಿಜೆಪಿ ಶ್ರೇಯಸ್ ಸಾವನ್ನು ನೀರಿನಲ್ಲಿ ಮುಳುಗಿ ಸ್ವಾಭಾವಿಕ ಸಾವು ಎಂಬುದಾಗಿ ಪರಿವರ್ತನೆ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ತಾಯಿ ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕುಟುಂಬದ ಪರವಾಗಿ ನಿಲ್ಲುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ಒಂದು ವಾರದ ಗಡುವು ನೀಡುತ್ತೇವೆ. ಇದರೊಳಗೆ ಈ ಕುರಿತು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ತಪಿತಸ್ಥರಿಗೆ ಶಿಕ್ಷೆ ವಿಧಿಸಿ ಮನೆಯವರಿಗೆ ನ್ಯಾಯ ಒದಗಿಸದ್ದರೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕರ್ಜೆಯ ಗ್ರಾಮಸ್ಥರೊಂದಿಗೆ ಸೇರಿ ಉಡುಪಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ತಾಪಂ ಸದಸ್ಯರಾದ ಡಾ.ಸುನೀತಾ ಶೆಟ್ಟಿ, ಗೋಪಿ ನಾಯ್ಕಿ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

‘ಹಲವು ಪ್ರಕರಣಗಳಲ್ಲಿ ಆರೋಪಿ’
ಈ ಪ್ರಕರಣದ ಆರೋಪಿಗಳು ಹಲವು ಸಮಯಗಳಿಂದ ಕರ್ಜೆ ಪರಿಸರದಲ್ಲಿ ಅಶಾಂತಿ ಸೃಷ್ಠಿ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸ್ಥಳೀಯ ಮನೆಯೊಂದರ ಗೇಟು ತೆಗೆದುಕೊಂಡು ಹೋಗಿ ಹೊರಗಡೆ ಬಿಸಾಡಿರುವ ಬಗ್ಗೆ ಇವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇವರ ತಂಡದಲ್ಲಿ ಹಲವು ಮಂದಿ ಇದ್ದಾರೆ. ಇವರೆಲ್ಲ ಹಲವು ಗಲಾಟೆಗಳಲ್ಲಿ ಭಾಗಿಗಳಾಗಿದ್ದಾರೆ ಎಂದು ಸ್ಥಳೀಯರಾದ ಶ್ರೀಕಾಂತ್ ಅಡಿಗ ಕರ್ಜೆ ದೂರಿದರು.
ಇವರು ತೋಟೆ ಕೊಟ್ಟ ವ್ಯಕ್ತಿಯ ಮಗನ ಹುಟ್ಟುಹಬ್ಬಕ್ಕಾಗಿ ಮೀನು ಹಿಡಿಯಲು ಶ್ರೇಯಸ್‌ನನ್ನು ಕರೆದುಕೊಂಡು ಬಂದಿದ್ದರು ಎಂಬ ಗುಮಾನಿ ಇದೆ. ಅದೇ ರೀತಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಅರ್ಚಕರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಪ್ರಕರಣದಲ್ಲೂ ಇವರು ಆರೋಪಿಗಳಾಗಿದ್ದಾರೆ ಎಂದು ಅವರು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News