ಮಂಗಳೂರು: ಕಾರು ಢಿಕ್ಕಿಯಾಗಿ ಪಾದಚಾರಿ ಸೇರಿ ಇಬ್ಬರು ಗಂಭೀರ

Update: 2019-11-11 18:01 GMT

ಮಂಗಳೂರು, ನ.11: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಾದಚಾರಿ ಸೇರಿದಂತೆ ಇಬ್ಬರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ (ನವಭಾರತ) ಸಮೀಪ ಸೋಮವಾರ ಸಂಜೆ ನಡೆದಿದೆ.

ಹಾಸನದ ಅಕ್ರಮ್ ಪಾಷಾ ಹಾಗೂ ಅನಿಲ್ ಗಂಭೀರವಾಗಿ ಗಾಯಗೊಂಡವರು. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಅರವಿಂದ ಹೆಬ್ರಿ ಅವರಿಗೂ ಗಾಯಗಳಾಗಿದ್ದು, ಮೂರು ಮಂದಿಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರು, ಅಲ್ಲಿಯೇ ನಿಂತಿದ್ದ ಮತ್ತೊಂದು ಕಾರಿಗೂ ಢಿಕ್ಕಿ ಹೊಡೆದು ಜಖಂಗೊಳಿಸಿದೆ. ಆ ಕಾರಿನೊಳಗಿದ್ದ ದಯಾನಂದ ಶೆಟ್ಟಿ ಎಂಬವರು ಘಟನೆಯಿಂದ ಆಘಾತಕ್ಕೊಳಗಾಗಿದ್ದು, ತಕ್ಷಣ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಘಟನೆ ವಿವರ: ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ನವಭಾರತ ವೃತ್ತ ಬಳಿಯ ಪೆಟ್ರೋಲ್ ಬಂಕ್ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಘಟನೆಗೆ ಕಾರಣವಾಗಿದೆ.

ಅತಿಯಾದ ವೇಗದಲ್ಲಿದ್ದ ಕಾರು ಪೆಟ್ರೋಲ್ ಬಂಕ್‌ನತ್ತ ತಿರುವು ಪಡೆದಿದ್ದು, ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಕ್ರಮ್ ಪಾಷಾ ಅವರಿಗೆ ಢಿಕ್ಕಿ ಹೊಡೆದಿದೆ. ಬಳಿಕ ನಿಲ್ಲದ ಕಾರು ಪೆಟ್ರೋಲ್ ಬಂಕ್ ಬಳಿ ಪಾನಿಪುರಿ ಮಾರಾಟ ಮಾಡುತ್ತಿದ್ದ ಅನಿಲ್ ಹಾಗೂ ಅಲ್ಲಿಯೇ ನಿಂತಿದ್ದ ದಯಾನಂದ ಶೆಟ್ಟಿ ಎಂಬವರ ಕಾರಿಗೂ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಕಾರೂ ಜಖಂ: ದಯಾನಂದ ಶೆಟ್ಟಿ ಅವರು ಪೆಟ್ರೋಲ್ ಬಂಕ್ ಬಳಿ ತಮ್ಮ ಕಾರನ್ನು ಪಾರ್ಕ್ ಮಾಡಿ ಕಾರಿನಲ್ಲಿ ಕುಳಿತುಕೊಂಡಿದ್ದರು. ಇದೇ ವೇಳೆ ಅರವಿಂದ ಹೆಬ್ರಿ ಅವರು ಚಲಾಯಿಸುತ್ತಿದ್ದ ಕಾರು ಬಂದು ಢಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಎರಡೂ ಕಾರುಗಳು ಜಖಂಗೊಂಡಿವೆ. ಅಪಘಾತಕ್ಕೆ ಕಾರಣವಾದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ನಿಲ್ಲಿಸಿದ್ದ ಕಾರಿನೊಳಗಿದ್ದ ದಯಾನಂದ ಶೆಟ್ಟಿ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ತಪ್ಪಿದ ದುರಂತ: ಪೆಟ್ರೋಲ್ ಬಂಕ್ ಬಳಿಯೇ ಈ ಅಪಘಾತ ಸಂಭವಿಸಿದೆ. ಒಂದುವೇಳೆ ಕಾರು ಪೆಟ್ರೋಲ್ ಬಂಕ್‌ನೊಳಗೆ ನುಗ್ಗಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆಯಿತ್ತು. ಆದರೆ ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಚಾಲಕ ಅರವಿಂದ್ ಕಾರು ಚಲಾಯಿಸುತ್ತಿದ್ದ ವೇಳೆ ಅವರಿಗೆ ಫಿಟ್ಸ್ ಕಾಣಿಸಿಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News