ಮೌಲಾನಾ ಆಝಾದ್ ಕೋಮು ಸಾಮರಸ್ಯದ ಅಪ್ಪಟ ಪ್ರತೀಕ: ಡಾ.ರಾಮದಾಸ ಪ್ರಭು

Update: 2019-11-11 14:59 GMT

ಉಡುಪಿ, ನ.11: ‘ಆಳದಲ್ಲಿ ಧಾರ್ಮಿಕರೂ, ಆಧ್ಯಾತ್ಮವಾದಿಗಳೂ ಆದ ಮಹಾತ್ಮ ಗಾಂಧಿ ಹಾಗೂಮೌಲಾನಾ ಅಬುಲ್ ಕಲಮ್ ಆಝಾದ್‌ರು ದೇಶ ವಿಭಜನೆಯನ್ನು ವಿರೋಧಿಸಿದರೆ, ಪಾಶ್ಚಾತ್ಯೀಕರಣಗೊಂಡ ಧಾರ್ಮಿಕ ನಿಷ್ಠೆ ಇಲ್ಲದ ಮಂದಿ ದೇಶ ವಿಭಜನೆಯನ್ನು ಬೆಂಬಲಿಸಿದರು. ಮೌಲಾನಾ ಆಝಾದ್ ಭಾರತದ ಸೃಜನಶೀಲ ಕಾಲ ಖಂಡವೊಂದರ ಕೋಮು ಸಾಮರಸ್ಯದ ಪ್ರತೀಕ ವಾಗಿದ್ದರು ಎಂದು ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಅಭಿಪ್ರಾಯ ಪಟ್ಟಿದ್ದಾರೆ.

ಕುಂಜಿಬೆಟ್ಟಿನ ಡಾ.ಟಿ.ಎಂ.ಎ.ಪೈ ಶಿಕ್ಷಣ ಕಾಲೇಜು ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಮಾಧವ ಮಂದಿರ ಸಭಾಂಗಣದಲ್ಲಿ ಇಂದು ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಸಂದರ್ಭದಲ್ಲಿ ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ದಿ. ಮೌಲಾನಾ ಅಬುಲ್ ಕಲಾಮ್ ಆಝಾದ್‌ರ ವ್ಯಕ್ತಿತ್ವ ಮತ್ತು ಸಾಧನೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಆಝಾದ್‌ರು ಈ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ, ಶಿಕ್ಷಣದಲ್ಲಿ ಪ್ರಜಾಪ್ರಭುತ್ವವಾದಿ ಮತನಿರಪೇಕ್ಷ ಮೌಲ್ಯಗಳಿಗೆ ಹಾಗೂ ಸ್ವಾಯತ್ತತೆಗೆ ದೊಡ್ಡ ಕೊಡುಗೆ ಕೊಟ್ಟವರು. ಸ್ವತಂತ್ರ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಆರಂಭದ ದಿನಗಳಲ್ಲಿ ಭದ್ರ ಬುನಾದಿ ಕಲ್ಪಿಸಿದ ಆಝಾದರನ್ನು ಇಂದು ನೆನೆಯುವುದು ಅರ್ಥಪೂರ್ಣ ಎಂದವರು ನುಡಿದರು.

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಪ್ರೊ. ಮುರಳೀಧರ ಉಪಾಧ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಮಾಜಿಕ, ಶೈಕ್ಷಣಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದು ಅನಿವಾರ್ಯವೆಂದು ನುಡಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಮಾತನಾಡಿ, 2019ರ ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿ ಪ್ರಸ್ತಾಪಿಸಿದಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ ವಾಗಲಿರುವ ನಾಲ್ಕು ವರ್ಷಗಳ ಸಮನ್ವಿತ ಬಿ.ಎಡ್ ಪದವಿ ವ್ಯಾಸಂಗ ಕ್ರಮ ದಿಂದ ಈ ದೇಶದಲ್ಲಿ ಶಿಕ್ಷಕರ ಶಿಕ್ಷಣ ಕಾಲೇಜುಗಳು ನಾಮಾವಶೇಷವಾಗುವುದು ನಿಜಕ್ಕೂ ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ವೈದ್ಯಕೀಯ ಕಾಲೇಜು, ತಂತ್ರಜ್ಞಾನ ಕಾಲೇಜು, ಕಾನೂನು ಕಾಲೇಜುಗಳಿರುವಾಗ ಕೇಂದ್ರ ಸರಕಾರಕ್ಕೆ ಶಿಕ್ಷಕರ ಶಿಕ್ಷಣ ಕಾಲೇಜು ಏಕೆ ಬೇಡವಾಗಿದೆ? ಶಿಕ್ಷಕರ ಶಿಕ್ಷಣ ಗುಣಮಟ್ಟ ಸುಧಾರಣೆ ದೃಷ್ಟಿಯಿಂದ ನಾಲ್ಕು ವರ್ಷಗಳ ಶಿಕ್ಷಕರ ಶಿಕ್ಷಣ ಕ್ರಮವನ್ನು ಪದವಿ ಕಾಲೇಜುಗಳಿಗೆ ವಹಿಸಿಕೊಡುವುದು ಶಿಕ್ಷಕರ ಶಿಕ್ಷಣ ಇತಿಹಾಸಕ್ಕೆ ಎಳೆದ ಬರೆ ಎಂದವರು ವಿವರಿಸಿದರು.

ಉಪನ್ಯಾಸಕಿ ರೂಪಾ ಕೆ. ಸ್ವಾಗತಿಸಿದರೆ, ಉಷಾ ಹೆಚ್. ವಂದಿಸಿದರು. ಪ್ರಭಾರ ಪ್ರಾಂಶುಪಾಲೆ ಧನಲಕ್ಷ್ಮೀ ಉಪಸ್ಥಿತರಿದ್ದರು. ಮಮತಾ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News