ಹಿ.ಪ್ರದೇಶವೇ ಕೈಬಿಟ್ಟ ಮಂಕಿ ಪಾರ್ಕ್‌ಗೆ ರಾಜ್ಯ ಸರಕಾರದ 20 ಕೋಟಿ ರೂ. ಬಿಡುಗಡೆ ಎಷ್ಟು ಸರಿ?: ಭಾಕಿಸಂ ಪ್ರಶ್ನೆ

Update: 2019-11-11 15:14 GMT
2010ರಲ್ಲಿ ಉಡುಪಿ ಜಿಲ್ಲಾ ಭಾಕಿಸಂನ ಪದಾಧಿಕಾರಿಗಳು ಹಿಮಾಚಲ ಪ್ರದೇಶದ ಮಂಕಿ ಪಾರ್ಕ್‌ನ ಅಧ್ಯಯನಕ್ಕೆ ತೆರಳಿದಾದ ತೆಗೆದ ಛಾಯಾಚಿತ್ರಗಳು.

ಉಡುಪಿ, ನ.11: ಹಿಮಾಚಲ ಪ್ರದೇಶ ಸರಕಾರವೇ ಕಾರ್ಯಸಾಧುವಲ್ಲವೆಂದು ಕೈ ಬಿಟ್ಟ ಮಂಕಿ ಪಾರ್ಕ್‌ಗೆ, ರಾಜ್ಯದ ಶಿವಮೊಗ್ಗದಲ್ಲಿ ಅದೇ ಮಾದರಿ ಯೋಜನೆಗೆ ಕರ್ನಾಟಕ ಸರಕಾರ 20 ಕೋಟಿ ರೂ. ಮಂಜೂರು ಮಾಡಿರುವುದು ಎಷ್ಟು ಸರಿ ಎಂದು ಉಡುಪಿ ಜಿಲ್ಲಾಭಾರತೀಯ ಕಿಸಾನ್ ಸಂಘ ರಾಜ್ಯ ಸರಕಾರವನ್ನು ಕಟುವಾಗಿ ಪ್ರಶ್ನಿಸಿದೆ.

ಹಿಮಾಚಲ ಪ್ರದೇಶದಲ್ಲೇ ಮಂಕಿ ಪಾರ್ಕ್ ಎಂಬುದು ಇಂದು ಇತಿಹಾಸ ಮಾತ್ರ. 2008ರಲ್ಲಿ ವಿಪರೀತ ಮಂಗಗಳ ಹಾವಳಿ ತಡೆಯಲು ಹಿಮಾಚಲ ಪ್ರದೇಶ ಸರಕಾರ ಪ್ರಾಯೋಗಿಕವಾಗಿ ಮಂಕಿ ಪಾರ್ಕ್‌ನ್ನು ನಿರ್ಮಿಸಿತಾದರೂ, ಅದರಿಂದ ಮಂಗಗಳ ನಿಯಂತ್ರಣ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಹಿಮಾಚಲ ದಲ್ಲಿ ಅನೇಕ ಸರಕಾರಗಳೇ ಉರುಳಿರುವ ಉದಾಹರಣೆಗಳಿವೆ ಎಂದು ಭಾಕಿಸಂ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕೊನೆಗೆ 2010ರ ಸುಮಾರಿಗೆ ಹಿಮಾಚಲ ಸರಕಾರ ಮಂಕಿ ಪಾರ್ಕ್‌ನಿಂದ ಮಂಗಗಳ ನಿಯಂತ್ರಣ ಸಾಧ್ಯವಿಲ್ಲ ಎಂಬ ಸ್ಪಷ್ಟ ನಿಲುವಿಗೆ ಬಂದು, ಅದನ್ನು ಕೈ ಬಿಟ್ಟು, ಸ್ಟರ್ಲೈಸೇಶನ್ ಸೆಂಟರ್(ಸಂತಾನ ಹರಣ ಚಿಕಿತ್ಸಾ ಕೇಂದ್ರ) ರಚಿಸಿ, ಬಹುತೇಕ ಮಂಗಗಳ ಉಪಟಳ ತಡೆಗಟ್ಟುವಲ್ಲಿ ಸಫಲವಾಗಿದೆ. ಹೀಗಿರುವಾಗ ಕಾರ್ಯಸಾಧುವಲ್ಲದ, ಇತಿಹಾಸದ ಪುಟ ಸೇರಿರುವ ಮಂಕಿ ಪಾರ್ಕ್ ರಚನೆಗೆ ಕರ್ನಾಟಕ ಸರಕಾರ 20 ಕೋಟಿ ರೂ. ಮಂಜೂರು ಮಾಡಿರುವುದು ಎಷ್ಟು ಸರಿ ಎಂದು ಅದು ಪ್ರಶ್ನಿಸಿದೆ.

ಕಾಡು ಪ್ರಾಣಿಗಳ ಹಾವಳಿಯಿಂದ ಕರಾವಳಿ ಹಾಗೂ ಮಲೆನಾಡಿನ ರೈತರು ಸೋತು ಸುಣ್ಣವಾಗಿದ್ದಾರೆ. ರೈತ ಬೆಳೆದ ಬೆಳೆಯಲ್ಲಿ ಮುಕ್ಕಾಲು ಭಾಗ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಅದರಲ್ಲೂ ಒಟ್ಟು ನಷ್ಟದಲ್ಲಿ ಅರ್ಧ ಭಾಗ ಮಂಗ ಗಳೊಂದರಿಂದಲೇ ಆಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ಸಮಸ್ಯೆಯ ಪರಿಹಾರಕ್ಕಾಗಿ ಭಾಕಿಸಂ ಅನೇಕ ಹೋರಾಟ, ಧರಣಿ ಕೈಗೊಂಡಿರುವುದಲ್ಲದೆ, ಎಲ್ಲಾ ಸಚಿವರು, ಶಾಸಕರಿಗೆ ಮನವಿ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಗೋಗೆರಿದಿದೆ.

ಇದರ ಫಲವಾಗಿ ದಿ.ಡಾ.ವಿ.ಎಸ್.ಆಚಾರ್ಯರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಕಿಸಾನ್ ಸಂಘದ ಪ್ರತಿನಿಧಿಗಳ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಬೆ ಕರೆದು, ಹಿಮಾಚಲ ಪ್ರದೇಶದ ಮಂಕಿ ಪಾರ್ಕ್‌ನ ಅಧ್ಯಯನ ನಡೆಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ 2010ರ ಆಗಸ್ಟ್‌ನಲ್ಲಿ ಅಂದಿನ ಮೂಡಬಿದರೆಯ ಎಸಿಎಫ್‌ಓ ಸದಾಶಿವ ಭಟ್ಟ ನೇತೃತ್ವದ ನಾಲ್ವರು ಅಧಿಕಾರಿಗಳು ಹಾಗು ಭಾಕಿಸಂನ ಅಂದಿನ ಅಧ್ಯಕ್ಷರಾಗಿದ್ದ ಬಿ.ವಿ.ಪೂಜಾರಿ ನೇತೃತ್ವದಲ್ಲಿ ನಾಲ್ವರು ಪದಾಧಿಕಾರಿಗಳು ಹಿಮಾಚಲ ಪ್ರದೇಶಕ್ಕೆ ತೆರಳಿ, ನಾಲ್ಕು ದಿನಗಳ ಕಾಲ ಅಧ್ಯಯನ ನೆಡೆಸಿ ಅಲ್ಲಿನ ಸರಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಭಾಗದ ಕಾಡುಪ್ರಾಣಿಗಳ ಸಮಸ್ಯೆಗೆ ಮತ್ತು ಮಂಗಗಳ ಸಮಸ್ಯೆಗೆ ಸೂಕ್ತ ಪರಿಹಾರವಾಗ ಬಹುದಾದ ಹಾಗೂ ಐದು ವರ್ಷದಲ್ಲಿ ಹಂತ ಹಂತವಾಗಿ ಅನುಷ್ಠಾನ ಗೊಳಿಸಲು 29 ಕೋಟಿ ರೂ. ವೆಚ್ಚದ ಪ್ರಸ್ತಾವನೆಯೊಂದನ್ನು ಸರಕಾರಕ್ಕೆ ಸಲ್ಲಿಸಿತ್ತು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಡಾ.ವಿ.ಎಸ್.ಆಚಾರ್ಯರ ಮರಣಾ ನಂತರ ಪ್ರಸ್ಥಾವನೆ ಮೂಲೆ ಗುಂಪಾ ಯಿತು. ಆ ನಂತರ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಭಾಕಿಸಂ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿದ್ದರು. ಅನಂತರ ಸಚಿವರಾಗಿದ ಪ್ರಮೋದ್ ಮದ್ವರಾಜ್‌ಗೂ ಮನವಿ ಸಲ್ಲಿಸಲಾಗಿತ್ತು. ಕಾರ್ಕಳದ ಶಾಸಕ ಸುನಿಲ್ ಕುಮಾರ್ ಕಾರ್ಕಳದಲ್ಲೇ ಸ್ಟರ್ಲೈಸೇಶನ್ ಕೇಂದ್ರ ಸ್ಥಾಪನೆಗೆ ಪ್ರಸ್ಥಾವನೆಯೊಂದನ್ನೂ ಸರಕಾರಕ್ಕೆ ಕಳುಹಿಸಿದ್ದರು ಎಂದು ಅದು ವಿವರಿಸಿದೆ.

ಯಡಿಯೂರಪ್ಪ ನೇತೃತ್ವದ ಸರಕಾರ ಬಂದಾಗ ಉಸ್ತುವಾರಿ ಸಚಿವರ ಮೂಲಕ ಸರಕಾರಕ್ಕೆ ಮತ್ತೆ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಮನವಿ ಮಾಡಲಾಗಿತ್ತು. ಅದರೆ ಇದೀಗ ಏಕಾಏಕಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದು, ರೈತರ ಹೆಸರಲ್ಲಿ ಕಾರ್ಯಸಾಧುವಲ್ಲದ ಯೋಜನೆಯ ಅನುಷ್ಠಾನಕ್ಕೆ ಹಾಗೂ ಈಗಾಗಲೇ ಇಲಾಖೆ ಮೂಲಕ ನಡೆದಿರುವ ಅಧ್ಯಯನದ ಹೆಸರಲ್ಲಿ ಹಣ ಅಪವ್ಯಯ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇಂದು ಹಿಮಾಚಲ ದಲ್ಲಿ ಮಂಕಿ ಪಾರ್ಕ್‌ನ ಕುರುಹುಗಳೇ ಇಲ್ಲದಿರುವಾಗ ರೈತರಲ್ಲಿ ಭ್ರಮೆ ಮೂಡಿಸಿ, ಅಧ್ಯಯನದ ಕಾರಣ ನೀಡಿ ಕಾಲಹರಣ ಮಾಡುವ ಕ್ರಮ ಸರಿ ಯಲ್ಲ ಎಂದು ಭಾಕಿಸಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ, ಮಲೆನಾಡು ಹಾಗೂ ಕರಾವಳಿ ಭಾಗದ ಸಚಿವರಿಗೆ ಮತ್ತು ಶಾಸಕರಿಗೆ ಪತ್ರ ಬರೆದು ಮನದಟ್ಟು ಮಾಡಲು ಸಂಘ ತೀರ್ಮಾನಿಸಿದೆ ಎಂದು ಉಡುಪ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಮುಖ್ಯಮಂತ್ರಿಗಳಿಗೆ ಸರಿಯಾದ ಮಾಹಿತಿ ನೀಡದೆ, ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಕಾಡುಪ್ರಾಣಿಗಳ ಹಾವಳಿಗೆ ಮುಖ್ಯವಾಗಿ ಅಭಯಾರಣ್ಯದೊಳಗೆ ಹಣ್ಣು ಬಿಡುವ ಮರಗಳನ್ನು ನೆಡದೆ, ಕೇವಲ ಅಕೇಶಿಯಾ, ಸಾಗುವಾನಿ, ಮಹಾಗನಿಯಂತಹ ಗಿಡಗಳನ್ನು ನೆಡುತ್ತಿರುವ ಅರಣ್ಯ ಇಲಾಖೆಯೆ ಕಾರಣ ಎಂಬುದು ಸಂಘಟನೆಯ ಆಕ್ಷೇಪವಾಗಿದೆ.

ಕಾಡಿನಲ್ಲಿ ಬೇಸಿಗೆಯಲ್ಲಿ ನೀರು ಹಾಗೂ ವರ್ಷದ ಎಲ್ಲಾ ಕಾಲದಲ್ಲೂ ಹಣ್ಣು ಹಂಪಲು ಸಿಗುವಂತಾದರೆ ಪ್ರಾಣಿಗಳು ಕಾಡನ್ನು ಬಿಟ್ಟು ಊರಿಗೆ ಬರುತ್ತಿರಲಿಲ್ಲ. ಇಲಾಖೆಯ ಅಧಿಕಾರಿಗಳ ತಪ್ಪುನೀತಿಯ ಫಲವಾಗಿ ರೈತರು ಇಂದು ಸಂಕಷ್ಟ ದಲ್ಲಿದ್ದಾರೆ. ಅಧಿಕಾರಿಗಳು ಅರಣ್ಯ ಕಾನೂನನ್ನು ಮುಂದಿಟ್ಟುಕೊಂಡು ಜನರಿ ಗಾಗಲೀ, ಜನಪ್ರತಿನಿಧಿಗಳಿಗಾಗಲೀ ಅಥವಾ ಸರಕಾರಕ್ಕಾಗಲೀ ಸರಿಯಾಗಿ ಸ್ಪಂದಿಸದೆ, ಪ್ರತೀ ವಿಚಾರಕ್ಕೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಈ ಬಗ್ಗೆ ಎಲ್ಲರಲ್ಲೂ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶವಿದೆ ಎಂದು ಸಂಘ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News