ಭಾರತದ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ!

Update: 2019-11-11 15:56 GMT

ಬಂಟ್ವಾಳ, ನ. 11: ಭಾರತದ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎನ್ನುವ ವಿವಾದಾತ್ಮಕ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹೊರಡಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೂರೇ ದಿನದಲ್ಲಿ ಅದನ್ನು ಹಿಂಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದ ಎಲ್ಲ ಶಾಲೆಗಳಲ್ಲಿ ನ.26ರಂದು ‘ಸಂವಿಧಾನ ದಿನ’ವನ್ನು ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಟೋಬರ್ 28ರಂದು ಕೈಪಿಡಿ ಸಹಿತ ಸುತ್ತೋಲೆಯೊಂದನ್ನು ಹೊರಡಿಸಿತ್ತು. ಇದರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಅಪಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯುತ ‘ಎಡವಟ್ಟು’ ಎಂದು ಸುತ್ತೋಲೆ ವಿರುದ್ಧ ಅಂಬೇಡ್ಕರ್‌ವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುತ್ತೋಲೆ ವಿರುದ್ಧ ಧ್ವನಿ ಮೊಳಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಮೂರೇ ದಿನಗಳಲ್ಲಿ ಸುತ್ತೋಲೆಯನ್ನು ಹಿಂಪಡೆದಿದೆ.

ಸುತ್ತೋಲೆಯಲ್ಲೇನಿದೆ?:
ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಈ ಸುತ್ತೋಲೆಯೊಂದನ್ನು ನ.6ರಂದು ಪ್ರಕಟಿಸಿ, ನ.26ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಸಂವಿಧಾನ ದಿನ ಆಚರಿಸುವಂತೆ ಆದೇಶಿಸಿತ್ತು. ಅದರ ಜೊತೆಗೆ ಈ ಬಾರಿ ಹೇಗೆ ಸಂವಿಧಾನ ದಿನ ಆಚರಿಸಬೇಕೆಂಬ ಮಾರ್ಗದರ್ಶಿ ಕೈಪಿಡಿಯನ್ನೂ ಅದರ ಜೊತೆಗೆ ಅಪ್ಲೋಡ್ ಮಾಡಿತ್ತು. ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿತ್ತು.

ಶಿಕ್ಷಣ ಇಲಾಖೆಯ ಈ ಸುತ್ತೋಲೆ ಹಾಗೂ ಕೈಪಿಡಿಗೆ ಅಂಬೇಡ್ಕರ್‌ವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಸತೊಡಗಿದರು. ಈ ನಡುವೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹಿಂಪಡೆದಿದೆ. ಆ ಸರಕಾರಿ ಸುತ್ತೋಲೆ ಮತ್ತು ಅದರ ಜೊತೆಗಿನ ಕೈಪಿಡಿಯನ್ನು ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ತಯಾರಿಸಿತ್ತು. ಶಿಕ್ಷಣ ಇಲಾಖೆ ಪ್ರತೀ ಶಾಲೆಗೂ ಈ ಸುತ್ತೋಲೆಯನ್ನು ಕಳುಹಿಸಿತ್ತು ಎಂದು ಹೇಳಲಾಗುತ್ತಿದೆ.

ಕೈಪಿಡಿಯಲ್ಲಿರುವ ವಿವಾದಾತ್ಮಕ ಅಂಶಗಳು:
ಪುಟ ಸಂಖ್ಯೆ 5, 10, 12 ಮತ್ತು 18ನೇ ಪುಟಗಳಲ್ಲಿ ಬಹಳ ನೇರವಾಗಿ ಮತ್ತು ಸ್ಪಷ್ಟವಾಗಿ ಕೆಲವೊಂದು ವಿವಾದಾತ್ಮಕ ಅಂಶಗಳನ್ನು ಉಲ್ಲೇಖಿಸಲಾಗಿದೆ.
‘‘ಭಾರತದ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ, ನಮ್ಮ ಸಂವಿಧಾನವು ನಮ್ಮ ದೇಶದಾದ್ಯಂತ ಇರುವ ವಿವಿಧ ಧರ್ಮ, ಜಾತಿ ಮತ್ತು ಬುಡಕಟ್ಟಿಗೆ ಸೇರಿದಂತಹ, ಅನೇಕ ಪುರುಷರು ಮತ್ತು ಮಹಿಳೆಯರು ಸೇರಿ ಮಾಡಿರುವಂತಹಾ ಒಂದು ಸಾಮೂಹಿಕ ಪ್ರಯತ್ನದ ಪಲವಾಗಿರುತ್ತದೆ. ಈ ಸಂವಿಧಾನದ ರಚನೆಯ ಹಿಂದೆ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಬದಲಾವಣೆಗಳಂತಹ ಅನೇಕ ಕ್ರಿಯೆಗಳು ನಡೆದಿರುತ್ತದೆ’’ ಎಂಬುದನ್ನು ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ ‘‘ಹಲವಾರು ಜನರಿಂದ ಕೂಡಿದ್ದ ಸಂವಿಧಾನ ರಚನಾ ಸಭೆ ಎಂದು ಕರೆಯಲ್ಪಟ್ಟ ತಂಡದಿಂದ ನಮ್ಮ ಸಂವಿಧಾನ ರಚಿಸಲಾಯಿತು ಎಂಬುದು ನಮ್ಮಲ್ಲಿ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ.’’ ಮತ್ತೊಂದೆಡೆ ‘‘ಬೇರೆ ಬೇರೆ ಸಮಿತಿಗಳು ಬರೆದಂತಹದ್ದನ್ನು ನೋಡಿ ಅವುಗಳನ್ನು ಒಟ್ಟು ಕೂಡಿಸಿ ಅಂತಿಮ ಕರಡನ್ನು ತಯಾರಿಸುವುದು ಅಂಬೇಡ್ಕರ್‌ರ ಕಾರ್ಯವಾಗಿತ್ತು. ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು’’ ಎನ್ನುವ ಉಲ್ಲೇಖಗಳು ಅಂಬೇಡ್ಕರ್ ರನ್ನು ಅಗೌರವದಿಂದ ಕಂಡಂತೆ ಎಂಬ ಆಕ್ರೋಶಗಳು ಕೇಳಿಬಂದಿತ್ತು. ಅಂಬೇಡ್ಕರ್ ಕುರಿತಾಗಿ ನಕಾರಾತ್ಮಕ ಅಂಶಗಳನ್ನು ಮಕ್ಕಳ ತಲೆಗೆ ತುರುಕುವ ಸಾಲುಗಳಿವು ಇವು ಬದಲಾಗಬೇಕೆಂಬ ಕೂಗು ಕೇಳಿ ಬಂದಿತ್ತು.

'ಮನುವಾದಿ ಸರಕಾರದಿಂದ ಸಂವಿಧಾನ ಶಿಲ್ಪಿಗೆ ಅವಮಾನ'
ಪ್ರಸ್ತುತ ಶಿಕ್ಷಣ ಇಲಾಖೆಯ ವೆಬ್‌ಸೈಟ್ ನಲ್ಲಿ ಈ ಸುತ್ತೋಲೆಯೇ ಸಿಗುತ್ತಿಲ್ಲ. ಸುತ್ತೋಲೆ ಕ್ರಮಸಂಖ್ಯೆ 632 ಅನ್ನು 9-11-2019 ರಂದು ಹಿಂದಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇಲಾಖಾ ವೆಬ್‌ಸೈಟ್‌ನಲ್ಲಿ ದೊರೆಯುತ್ತಿದೆ. ಇಷ್ಟಾದರೂ ಈಗಿನ ಮನುವಾದಿ ಸರಕಾರ ಪದೇ ಪದೇ ಸಂವಿಧಾನ, ಸಂವಿಧಾನ ಶಿಲ್ಪಿ ಮತ್ತು ಬಾರತದ ಅಖಂಡತೆಯನ್ನು ಅವಮಾನಿಸುತ್ತಲೇ ಇದೆ. ಇದನ್ನು ಒಕ್ಕೊರಲಿನಿಂದ ಧಿಕ್ಕರಿಸಬೇಕು. ಗ್ರಾಮ ಪಂಚಾಯತ್ ಸದಸ್ಯರಿಂದ ತೊಡಗಿ ಸಂಸದರ ತನಕ ಇದನ್ನು ಮುಂಚೂಣಿಯಲ್ಲಿ ನಿಂತು ವಿರೋಧಿಸುವಂತೆ ಚಾಟಿ ಬೀಸಿ ಒತ್ತಡ ಹೇರಬೇಕು.

-ಡಾ. ಕೃಷ್ಣಮೂರ್ತಿ ಚಮರಂ- ಮೈಸೂರು
ಬಹುಜನ ಚಿಂತಕರು, ಸಮಾಜ ಸೇವಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News