ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ

Update: 2019-11-11 16:10 GMT

ಮಂಗಳೂರು, ನ.11: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ನ.12ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ, ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ, ಜಿಲ್ಲಾಡಳಿತ ಸರ್ವ ಸಿದ್ಧತೆ ನಡೆಸಿದೆ.

27 ಮಂದಿ ಪಕ್ಷೇತರರ ಸಹಿತ 60 ವಾರ್ಡ್‌ಗಳಲ್ಲಿ 180 ಸ್ಪರ್ಧಿಗಳು ಕಣದಲ್ಲಿದ್ದಾರೆ. ಪ್ರಬಲ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿದೆ. 60 ವಾರ್ಡ್‌ಗಳ 1,99, 989 ಪುರುಷರು ಮತ್ತು 1,87,465 ಮಹಿಳೆಯರು ಹಾಗೂ 63 ಇತರರ ಸಹಿತ 3,87,517 ಮತದಾರರರು 180 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದು, ನ.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಮತದಾನಕ್ಕಾಗಿ 448 ಮತಗಟ್ಟೆಗಳನ್ನು ತೆರೆಯಲಾಗಿದೆ. ಅದರಲ್ಲಿ 448 ಮತಗಟ್ಟೆ ಅಧಿಕಾರಿಗಳು, 448 ಸಹಾಯಕ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಪೊಲೀಸ್ ಇಲಾಖೆ: ಮಂಗಳೂರು ನಗರ ಪೊಲೀಸ್ ಇಲಾಖೆಯೂ ಚುನಾವಣೆಯು ಸುಸೂತ್ರವಾಗಿ ನಡೆಸಲು ಸರ್ವಸಿದ್ಧತೆ ನಡೆಸಿದೆ. 448 ಮತಗಟ್ಟೆಗಳ ಪೈಕಿ ಪೊಲೀಸ್ ಇಲಾಖೆಯು 75 ಸೂಕ್ಷ್ಮ ಮತ್ತು 373 ಸಾಮಾನ್ಯ ಮತಗಟ್ಟೆ ಎಂದು ಗುರುತಿಸಿದೆ. 33 ಸೆಕ್ಟರ್ ಮೊಬೈಲ್. 12 ಇನ್‌ಸ್ಪೆಕ್ಟರ್ ಮೊಬೈಲ್‌ಗಳನ್ನು ನಿಯೋಜಿಸಲಾಗಿದೆ. 8 ಚೆಕ್‌ಪೋಸ್ಟ್‌ಗಳು (ರಾತ್ರಿ ಕಾರ್ಯಾಚರಣೆ ಸಹಿತ)ತೆರೆಯಲಾಗಿದೆ.

ಪ್ರತಿಯೊಂದು ಸೂಕ್ಷ್ಮ ಮತಗಟ್ಟೆಗೆ ಒಬ್ಬ ಹೆಡ್ ಕಾನ್‌ಸ್ಟೇಬಲ್ ಮತ್ತು ಒಬ್ಬ ಹೋಮ್‌ಗಾರ್ಡ್, ಪ್ರತಿಯೊಂದು ಸಾಮಾನ್ಯ ಮತಗಟ್ಟೆಗೆ ಒಬ್ಬ ಕಾನ್‌ಸ್ಟೇಬಲ್ ಮತ್ತು ಒಬ್ಬ ಹೋಮ್‌ಗಾರ್ಡ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ.

ಅದಲ್ಲದೆ ಇಬ್ಬರು ಉಪ ಪೊಲೀಸ್ ಆಯುಕ್ತರು, ನಾಲ್ವರು ಸಹಾಯಕ ಪೊಲೀಸ್ ಆಯುಕ್ತರು, 12 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 32 ಎಸ್ಸೈಗಳು, 77 ಎಎಸ್ಸೈಗಳು, 51 ಹೆಚ್‌ಸಿ-ಪಿಸಿಗಳು, 193 ಹೋಮ್‌ಗಾರ್ಡ್ಸ್‌ಗಳಲ್ಲದೆ, 5 ಕೆಎಸ್ಸಾರ್‌ಪಿ, 2 ಆರ್‌ಎಎಫ್ ತಂಡವಲ್ಲದೆ 10 ಕಾರುಗಳನ್ನು ಕೂಡಾ ಬಳಸಲಾಗುತ್ತದೆ.

►ವಾರ್ಡ್‌ಗಳ ಸಂಖ್ಯೆ 60
►ಕಣದಲ್ಲಿರುವ ಅಭ್ಯರ್ಥಿಗಳು 180
►ಬಿಜೆಪಿ-60
►ಕಾಂಗ್ರೆಸ್-60
►ಜೆಡಿಎಸ್ -12
►ಸಿಪಿಎಂ-7
►ಸಿಪಿಐ -1
►ಎಸ್‌ಡಿಪಿಐ-6
►ಜೆಡಿಯು- 2
►ಡಬ್ಲ್ಯುಪಿಐ-3
►ಕರ್ನಾಟಕ ರಾಷ್ಟ್ರ ಸಮಿತಿ- 2
►ಪಕ್ಷೇತರರು- 27

►448 ಮತಗಟ್ಟೆಗಳು
►448 ಮತಗಟ್ಟೆ ಅಧಿಕಾರಿಗಳು
►448 ಸಹಾಯಕ ಮತಗಟ್ಟೆ ಅಧಿಕಾರಿಗಳು

►ಈ ಚುನಾವಣೆಗೆ ಇವಿಎಂ ಬಳಸಲ್ಪಟ್ಟರೂ ವಿವಿಪ್ಯಾಟ್ ಬಳಕೆ ಇಲ್ಲ.
►ಮತದಾನ ವೇಳೆ ಎಡಗೈ ಉಂಗುರ ಬೆರಳಿಗೆ ಶಾಯಿ ಗುರುತು ಹಾಕಲಾಗುವುದು.
►‘ನೋಟಾ’ ಅವಕಾಶ ಕಲ್ಪಿಸಲಾಗಿದೆ.
►ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಫೋಟೋ ಬಳಸಲಾಗುತ್ತದೆ.

ನ್ಯಾಯಾಲಯಕ್ಕೆ ರಜೆ ಘೋಷಣೆ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನ.12ರಂದು ಮಂಗಳೂರು ನ್ಯಾಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಮಂಗಳವಾರದ ಕೋರ್ಟ್ ಕಲಾಪವನ್ನು ನ.13ರಂದು ನಡೆಸಲಾಗುತ್ತದೆ.

ನ.14ರಂದು ಬೆಳಗ್ಗೆ 8 ಗಂಟೆಗೆ ನಗರದ ರೊಝಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. 5 ವಾರ್ಡ್‌ಗೆ 1ರಂತೆ ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಅದರಲ್ಲಿ ಒಬ್ಬ ಚುನಾವಣಾಧಿಕಾರಿ, 4 ಅಧಿಕಾರಿ, 4 ಸಹಾಯಕರು, 4 ಡಿ ಗ್ರೂಪ್ ನೌಕರರ ಸಹಿತ 780ರಷ್ಟು ಅಧಿಕಾರಿ-ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News