ಮನಪಾಕ್ಕೆ ಸಡ್ಡು ಹೊಡೆಯುತ್ತಿರುವ ನಾಗರಿಕರ ತಂಡ!

Update: 2019-11-11 17:15 GMT

ಮಂಗಳೂರು, ನ.11: ನಗರದ ಹಲವು ಪ್ರಮುಖ ರಸ್ತೆಗಳು ಈ ಬಾರಿಯ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ಆಯೋಗ್ಯವಾಗಿವೆ. ಗುಂಡಿಗಳಿಂದ ತುಂಬಿದ್ದು, ಈ ಬಾರಿ ಮಳೆಗಾಲ ಇನ್ನೂ ಕೊನೆಗೊಳ್ಳದಿರುವ ಕಾರಣ ನೀಡಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಲವು ಕಡೆ ಪ್ಯಾಚ್‌ವರ್ಕ್ ಕಾರ್ಯಕ್ಕೆ ಹಿಂದೇಟು ಹಾಕಿದ್ದಾರೆ. ಆದರೆ, ಮಂಗಳೂರು ನಾಗರಿಕರ ತಂಡವೊಂದು ಮಾತ್ರ ಸದ್ದು ಗದ್ದಲವಿಲ್ಲದೆ ಪ್ರಚಾರದ ಹಂಗಿಲ್ಲದೆ, ತಮ್ಮದೇ ಸ್ವಂತ ಖರ್ಚಿನಲ್ಲಿ ಮನಪಾಕ್ಕೆ ಸಡ್ಡು ಹೊಡೆಯುವ ರೀತಿಯಲ್ಲಿ ರಸ್ತೆಯ ಹೊಂಡ, ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ.

72ರ ಹರೆಯಡ ಗಿಲ್ಬರ್ಟ್ ಡಿಸೋಜ ತಮ್ಮ ತಂಡದ ಸದಸ್ಯರಾದ ಅರ್ಜುನ್ ಮಸ್ಕರೇನಸ್, ನಸೀರ್ ಮತ್ತು ಜಾಯ್ ಗೊನ್ಸಾಲ್ವಿಸ್ ಸಹಕಾರದಲ್ಲಿ ಸೋಜ ಎಂಟರ್‌ಪ್ರೈಸಸ್‌ನ ಮಾಲಕರಾಗಿರುವ ಗಿಲ್ಬರ್ಟ್ ಡಿಸೋಜ ಈಗಾಗಲೇ ಕಂಕನಾಡಿಯಿಂದ ಪಂಪ್‌ವೆಲ್‌ವರೆಗಿನ ಹೊಂಡಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಿದ್ದಾರೆ.

ಇಂದು ಮತ್ತೆ ನಗರದ ಜ್ಯೋತಿ ಸರ್ಕಲ್, ಡಾನ್‌ಬಾಸ್ಕೋ ರಸ್ತೆ, ಹಂಪನ್‌ಕಟ್ಟ ಮತ್ತಿತರೆಡೆ ಸುಮಾರು 45 ಕಡೆಗಳಲ್ಲಿ ಕಿತ್ತುಹೋಗಿರುವ ಇಂಟರ್‌ಲಾಕ್‌ಗಳನ್ನು ಸರಿಪಡಿಸಲು ಪರಿಶೀಲನೆ ನಡೆಸಿ ಲೆಕ್ಕಾಚಾರ ಪಡೆದುಕೊಂಡಿದ್ದಾರೆ. ಶನಿವಾರದಂದು ಅಗತ್ಯ ಸಾಮಾನುಗಳೊಂದಿಗೆ ಈ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಸಲಿದ್ದೇವೆ ಎಂದು ಗಿಲ್ಬರ್ಟ್ ಡಿಸೋಜ ತಿಳಿಸಿದ್ದಾರೆ.

ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 1991ರಲ್ಲಿ ಇಂಡಿಯನ್ ಸರ್ವಿಸ್ ಕ್ಲಬ್ ಆರಂಭಿಸಿದ್ದರು. ಬಳಿಕ ಈ ಕ್ಲಬ್ ಮೂಲಕ ಸ್ವಚ್ಛ ನಗರ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ವಾಸ್‌ಲೇನ್‌ನನ್ನು ಈ ಕ್ಲಬ್ ಮೂಲಕ ಸ್ವಚ್ಛಗೊಳಿಸುವ ಅಭಿಯಾನ ನಡೆದಿತ್ತು. ಬಳಿಕ ಆರ್ಯ ಸಮಾಜ ರೋಡನ್ನು ಸ್ವಚ್ಛಗೊಳಿಸಲು ಮುಂದಾದಾಗ ಸಾಕಷ್ಟು ಪ್ರೋತ್ಸಾಹ ಸಿಗದ ಕಾರಣ ಕ್ಲಬನ್ನು ವಿಸರ್ಜಿಸಬೇಕಾಯಿತು. ಅವರು ಹೇಳುವ ಪ್ರಕಾರ ಇದೀಗ ಉತ್ತಮ ಬೆಂಬಲ ಸಿಗುತ್ತಿದೆ. ಈ ಗುಂಡಿಗಳನ್ನು ಮುಚ್ಚುವುದು ದೊಡ್ಡ ಕೆಲಸವಲ್ಲ ಅಥವಾ ಹೆಚ್ಚಿನ ಖರ್ಚು ಕೂಡ ಇಲ್ಲ. ತಮ್ಮ ಈ ಕಾರ್ಯಕ್ಕೆ ನಗರ ಪೊಲೀಸರಿಂದಲೂ ಬೆಂಬಲ ವ್ಯಕ್ತವಾಗಿದೆ ಎಂದು ಗಿಲ್ಬರ್ಟ್ ಡಿಸೋಜ ಹೇಳುತ್ತಾರೆ.

ಈಗಾಗಲೇ ಕಂಕನಾಡಿಯಿಂದ ಪಂಪ್‌ವೆಲ್‌ವರೆಗಿನ ಗುಂಡಿಗಳನ್ನು ಮುಚ್ಚಲು ಕಾಂಕ್ರಿಟ್ ಮಿಕ್ಸ್ ಬಳಸಲಾಗಿದೆ. ಮುಂದೆ ಇಂಟರ್‌ಲಾಕ್‌ಗಳನ್ನು ಮುಚ್ಚಿ ಸರಿಪಡಿಸಲಾಗುವುದು. ಹೆಚ್ಚಿನ ಯುವಜನತೆ ಈ ಕಾರ್ಯಕ್ಕೆ ಮುಂದೆ ಬಂದು ಸಹಕರಿಸಬೇಕೆಂಬುದು ಅವರ ಆಶಯ.
ಜನರಿಂದ ತೆರಿಗೆಯನ್ನು ಪಡೆಯುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಯೋಗ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಆದರೆ, ಸಬೂಬು ಹೇಳಿಕೊಂಡು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುತ್ತಿರುವ ಮನಪಾ ಆಡಳಿತವನ್ನು ಎಚ್ಚರಿಸುವಲ್ಲಿ ‘ಗಾಂಧಿಗಿರಿ’ಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ನಾಗರಿಕರ ತಂಡದ ಕಾರ್ಯ ಮಾತ್ರ ಸದ್ಯ ಶ್ಲಾಘನೆಗೆ ಪಾತ್ರವಾಗುತ್ತಿದೆ.

ಕಳೆದ ವಾರ ನಮ್ಮ ತಂಡ ಕಂಕನಾಡಿಯಿಂದ ಪಂಪ್‌ವೆಲ್‌ವರೆಗಿನ ಗುಂಡಿಗಳನ್ನು ಮುಚ್ಚಿದೆ. ಇಂದು ನಗರದ ಹಲವುಕಡೆ ಎದ್ದಿರುವ, ಕಿತ್ತುಹೋಗಿರುವ ಇಂಟರ್‌ಲಾಕ್ಳ ಅಳತೆಯನ್ನು ಲೆಕ್ಕಾಚಾರ ಮಾಡಲಾಗಿದೆ. ಶನಿವಾರ ಅದನ್ನು ಮುಚ್ಚುವ, ಸರಿಪಡಿಸುವ ಕೆಲಸವನ್ನು ಮಾಡಲಿದ್ದೇವೆ.
-ಅರ್ಜುನ್ ಮಸ್ಕರೇನಸ್, ತಂಡದ ಇನ್ನೋರ್ವ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News