ಎಕ್ಕಾರು ಪರಿಸರದಲ್ಲಿ ಕಾಡುಕೋಣ ಹಾವಳಿ

Update: 2019-11-11 17:29 GMT

ಬಜಪೆ:ಎಕ್ಕಾರು ಪರಿಸರದ ಅಗರಗುತ್ತು, ಬೇಡೆ, ಅರಸುಲಪದವು ಹಾಗೂ ಹುಣ್ಸೆಕಟ್ಟೆ ಪದವು ಪ್ರದೇಶಗಳಲ್ಲಿ ಕಾಡುಕೋಣಗಳ  ಕಾಟದಿಂದ  ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಎಕ್ಕಾರು ಹುಣ್ಸೆ ಕಟ್ಟೆ ಸಮೀಪದ   ಪದವು ಪ್ರದೇಶದ ಗುಡ್ಡ ಪ್ರದೇಶದಿಂದ ಅಗರಗುತ್ತು ಹಾಗೂ ಬೇಡೆ ಪ್ರದೇಶಕ್ಕೆ ಕೆಲವು ದಿನಗಳಿಂದ ಸಂಜೆಯ ಹೊತ್ತಿನಲ್ಲಿ ಕಾಡುಕೋಣಗಳು ಲಗ್ಗೆಯಿಡುತ್ತಿದೆ ಎಂದು ಸ್ಥಳೀಯ  ಮಹಿಳೆಯೊಬ್ಬರು ತಿಳಿಸಿದ್ದಾರೆ.  ರೈತರು ಬೆಳೆದ ಭತ್ತ, ಅಡಕೆ, ಬಾಳೆ ಫಸಲನ್ನು ಕಾಡುಕೋಣ ಹಾಳುಗೆಡುವುತ್ತಿದೆ. ಅಲ್ಲದೆ ಸಮೀಪದ ಕೃಷಿ ಭೂಮಿಗೂ ದಾಳಿ ಮಾಡುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಕಾಡುಕೋಣದ ಕಾಟವು ಸ್ಥಳೀಯ ಜನರ ನೆಮ್ಮದಿಯನ್ನು ಹಾಳುಗೆಡಹುತ್ತಿದೆ. ತಂಡವಾಗಿ ಕಾಡುಕೊಣಗಳು ಬಂದು ಸಂಜೆಯ ಸಮಯದಲ್ಲಿ ಸಮೀಪದಲ್ಲಿನ ಹುಲ್ಲುಗಳನ್ನು ಮೇಯುತ್ತಿದೆ. ಈ ಭಾಗದಲ್ಲಿ ಮನೆ ಕೂಡ ಕಡಿಮೆ ಸಂಖ್ಯೆಯಲ್ಲಿದ್ದು, ಇಲ್ಲಿನ ನಿವಾಸಿಗಳು ಗುಡ್ಡ ಪ್ರದೇಶದ ದಾರಿಯಲ್ಲಿಯೇ ನಡೆದುಕೊಂಡು ಹೋಗಬೇಕಾಗುತ್ತಿದೆ. ಅಲ್ಲದೆ ಎಕ್ಕಾರಿನಿಂದ ಮುಚ್ಚೂರಿಗೆ ಸಾಗುವಂತಹ ರಸ್ತೆಯ ಅರಸುಲ ಪದವು ಸಮೀಪವೂ ಸಂಜೆ ಹೊತ್ತು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕಾಡು ಕೋಣ ಮೇಯುತ್ತಿದ್ದನ್ನು ಗಮನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಎಕ್ಕಾರು ಹುಣ್ಸೆಕಟ್ಟೆ ಸಮೀಪದ ಮನೆಯೊಂದರ ದನದ ಹಟ್ಟಿಗೆ ರಾತ್ರಿಯ ಸಮಯದಲ್ಲಿ ಚಿರತೆಯೊಂದು ದಾಳಿ ಮಾಡಿ ಕರುವೊಂದನ್ನು ತಿಂದು ಹಾಕಿದ ಘಟನೆ ಕೂಡ ನಡೆದಿತ್ತು. ಇದೀಗ ಕಾಡು ಕೋಣದ ಕಾಟ ಎದುರಾಗಿದ್ದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಎಕ್ಕಾರು ಬೇಡೆ ಎಂಬ ಪ್ರದೇಶದಲ್ಲಿನ ಮನೆಯೊಂದರಲ್ಲಿ ಬೆಳೆದ ಬಾಳೆ ಗಿಡಗಳನ್ನು ನಾಶ ಮಾಡಿದೆ. ಅಲ್ಲದೆ ಕೆಲ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯು ಸೂಕ್ತ ರಕ್ಷಣೆ ಒದಗಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News