ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣ: ಸಿಬಿಐ ತನಿಖೆಗೆ ಮಾಸ್ ಇಂಡಿಯಾ ಒತ್ತಾಯ

Update: 2019-11-11 17:45 GMT

ಉಡುಪಿ, ನ.11: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣವನ್ನು ಸರಕಾರ ಸಿಓಡಿ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ ಸಾವಿಗೆ ಕಾರಣವನ್ನು ಬಹಿರಂಗಪಡಿಸಬೇಕೆಂದು ಮಾಸ್ ಇಂಡಿಯಾ ಮಾಹಿತಿ ಸೇವಾ ಸಮಿತಿ ಒತ್ತಾಯಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಸ್ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟೆಯಾರ್, ಪ್ರಸ್ತುತ ಈ ಪ್ರಕರಣದ ತನಿಖೆ ಯನ್ನು ನಡೆಸುತ್ತಿರುವ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರಿಗೆ ಕೆಲವೊಂದು ಮಿತಿಗಳಿರುವುದರಿಂದ ಪರಿಪೂರ್ಣವಾಗಿ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಆದುದರಿಂದ ಈ ಕುರಿತು ಉನ್ನತ ಮಟ್ಟದ ತನಿಖೆ ಅಗತ್ಯವಾಗಿ ಮಾಡಬೇಕು, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕು. ಆ ಮೂಲಕ ಮೃತರ ಕುಟುಂಬ ಹಾಗೂ ಭಕ್ತರಿಗೆ ನ್ಯಾಯ ಒದಗಿಸಬೇಕು. ಈ ಪ್ರಕರಣದಲ್ಲಿ ಕೆಲವು ಗಣ್ಯರು ಸೇರಿಕೊಂಡಿರುವ ಬಗ್ಗೆ ಸಂಶಯ ಇದೆ. ಆದುದರಿಂದ ಹಣದ ಆಮಿಷದಿಂದ ಈ ಪ್ರಕರಣವು ಮುಚ್ಚುವ ಸಾಧ್ಯತೆ ಇದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕೊನ್ರಾಡ್ ಕ್ಯಾಸ್ತಲಿನೋ ಶಿರ್ವ ಮಾತನಾಡಿ, ಫಾ.ಮಹೇಶ್ ಡಿಸೋಜ ಸಾವಿನ ಬಗ್ಗೆ ಕೆಲವೊಂದು ಗೊಂದಲ ಹಾಗೂ ಅನುಮಾನಗಳಿವೆ. ಚರ್ಚ್‌ನ ಪ್ರಧಾನ ಧರ್ಮಗುರುಗಳೊಂದಿಗೆ ಅವರ ಸಂಬಂಧ ಒಳ್ಳೆದಿರಲಿಲ್ಲ. ಈ ಬಗ್ಗೆ ಅವರು 15 ದಿನಗಳ ಹಿಂದೆ ನಮ್ಮಲ್ಲಿ ಹೇಳಿಕೊಂಡಿದ್ದರು. ಅದೇ ರೀತಿ ಅವರ ತಾಯಿಯಲ್ಲೂ ಹೇಳಿದ್ದಾರೆ. ಇವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೊ ಎಂಬುದು ಬಹಿರಂಗ ಆಗಬೇಕು. ಆತ್ಮಹತ್ಯೆಯಾಗಿದ್ದರೆ ಅದಕ್ಕೆ ಕಾರಣ ಏನು ಎಂಬುದು ತಿಳಿಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಬ್ರಹ್ಮಾವರ ಅಧ್ಯಕ್ಷ ಸ್ಟೀಫನ್ ರಾಜೇಶ್ ಪಿರೇರಾ, ಕಳತ್ತೂರು ಅಧ್ಯಕ್ಷ ಪ್ರವೀಣ್ ಕೋರ್ಡ್ಡ, ಶಿರ್ವ ಅಧ್ಯಕ್ಷ ಜಾನ್ಸನ್ ಡಾಲ್ಫ್ರೇಡ್ ಕ್ಯಾಸ್ತಲಿನೋ, ಸುನೀಲ್ ಕಬ್ರಾಲ್ ಶಿರ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News