‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಕೃತಿ ಲೋಕಾರ್ಪಣೆ

Update: 2019-11-11 18:40 GMT

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ ಕುರಿತಂತೆ ರಚಿಸಲಾದ ‘ಪ್ರವಾದಿ ಮುಹಮ್ಮದ್ (ಸ) ಎಲ್ಲರಿಗಾಗಿ’ ಎಂಬ ಕೃತಿಯ ಲೋಕಾರ್ಪಣೆ ಹಾಗೂ ಪ್ರವಾದಿ ಎಲ್ಲರಿಗಾಗಿ ಸೀರತ್ ಅಭಿಯಾನ ಉದ್ಘಾಟನೆ ವಿನೂತ ಕಾರ್ಯಕ್ರಮ ಸೋಮವಾರ ಇಲ್ಲಿನ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಶಮ್ಸುದ್ದೀನ್ ವೃತ್ತದ ಬಳಿ ಸಾಗರ್ ರಸ್ತೆಯಲ್ಲಿ ಜನ ಸಾಮಾನ್ಯರ ಮಧ್ಯೆ ಜರಗಿತು.

ಕೃತಿಯನ್ನು ಲೋಕಾರ್ಪಣೆಗೈದು ಮಾತನಾಡಿದ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ, ಪ್ರವಾದಿ ಮುಹಮ್ಮದ್ ರ ಸಂದೇಶಗಳು ಸರ್ವಕಾಲಿಕ ಸತ್ಯವಾಗಿದ್ದು ತಮ್ಮ ಸಂದೇಶಗಳ ಮೂಲಕ ಎಲ್ಲರ ಒಳಿತಿಗಾಗಿ ಸನ್ಮಾರ್ಗವನ್ನು ಸೂಚಿಸಿದ್ದಾರೆ. ಧರ್ಮಗಳು ಗಡಿಗಳಾಗದೆ ನಮ್ಮ ಅಂತರಂಗವನ್ನು ನೋಡುವಂತಹ ಕನ್ನಡಿಯಾಗಬೇಕು ಜೊತೆಗೆ ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಂತಹ ಸೂಕ್ಷ್ಮದರ್ಶಕವಾಗಬೇಕು, ಎಲ್ಲರ ಜೊತೆಗೆ ಬಾಳುವಂತಹ ಮನಸ್ಸುಗಳನ್ನು ಕೂಡುವಂತಹ ಮಾರ್ಗದರ್ಶಿಸೂತ್ರವಾಗಬೇಕು ಎಂದರು. 

ಆನತಾ ವಿದ್ಯಾಲಯ ಪದವಿಪೂರ್ವ ಕಾಲೇಜು ಶಿರಾಲಿಯ ಪ್ರಾಂಶುಪಾಲ ಎ.ಬಿ.ರಾಮರಥ್ ಮಾತನಾಡಿ, ಮಾನವ ಸಂಬಂಧಗಳ ಮಧ್ಯೆ ಗೋಡೆಗಳು ಸರಿಯಲ್ಲ. ಮನುಷ್ಯ ಕುಲಂ ತಾನೊಂದೆ ವಲಂ ಎನ್ನುವಂತೆ ಮನುಷ್ಯರೆಲ್ಲರೂ ಕೂಡಿ ಬಾಳಿದಾಗ ಬದುಕಿನಲ್ಲಿ ಸಂತೋಷ ಉಂಟಾಗುತ್ತದೆ. ಧರ್ಮಗಳನ್ನು ಗುತ್ತಿಗೆ ಪಡೆದು ದರ್ಪದಿಂದ ನಡೆಯುವ ಕಾಲವೀಗ ಮುಗಿಯಿತು. ಮುಹಮ್ಮದ್ ಪೈಗಂಬರರ ವಿಶ್ವಸಂದೇಶವು ಇದನ್ನೇ ಸಾರುತ್ತದೆ ಧರ್ಮವನ್ನು ಅಪಾರ್ಥ ಮಾಡಿಕೊಂಡು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು. 

ಸಮಾಜಸೇವಕ ಹಾಗೂ ಪತ್ರಕರ್ತ ಸತೀಶ್ ನಾಯ್ಕ ಮಾತನಾಡಿ, ಧರ್ಮದ ನೆರಳಲ್ಲಿ ನಾವೆಲ್ಲ ಬದುಕಬೇಕು. ಎಲ್ಲ ದಿಕ್ಕಿನಿಂದ ಬರುವ ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವ ಗುಣ ನಮ್ಮದಾಗಿರಬೇಕು. ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಉಪಾಧ್ಯಕ್ಷ ಮುಜಾಹಿದ್ ಮುಸ್ತಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಗಿತ್ರೀಫ್ ರಿದಾ ಮಾನ್ವಿ ಕುರ್ ಆನ್ ವಾಚನ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. 

ಕೃತಿ ಬಿಡುಗಡೆ ಸಮಾರಂಭದಲ್ಲಿ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ, ಕಾದಿರ್ ಮೀರಾ ಪಟೇಲ್, ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಪ್ರೋ.ಸೈಯ್ಯದ್ ಹಾಷಿಮ್ ಝರ್‍ಝರಿ, ಮುಹಮ್ಮದ್ ಯುನೂಸ್ ರುಕ್ನುದ್ದೀನ್, ಖಮರುದ್ದೀನ್ ಮಷಾಯಿಕ್, ಎಸ್.ಐ.ಓ ಭಟ್ಕಳ ಶಾಖೆಯ ಅಧ್ಯಕ್ಷ ಸನಾವುಲ್ಲಾ ಅಸಾದಿ, ಅಬ್ದುಲ್ ಜಬ್ಬಾರ್ ಅಸಾದಿ, ಡಾ.ನಸೀಂ ಖಾನ್ ಮತ್ತಿತರರು  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News