ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಮತದಾನ ಆರಂಭ

Update: 2019-11-12 05:42 GMT

ಮಂಗಳೂರು, ನ.12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಇಂದು(ಮಂಗಳವಾರ) ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದೆ.

ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನಗರದ ಲೇಡಿಹಿಲ್ ಚರ್ಚ್ ಸಮೀಪದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಮತ ಚಲಾಯಿಸಿದರು.

ಶಾಸಕ ಡಿ.ವೇದವ್ಯಾಸ್ ಕಾಮತ್ ಪತ್ನಿ ವೃಂದಾ ಕಾಮತ್ ಜೊತೆ ನಗರದ ಮಣ್ಣಗುಡ್ಡೆ ಗಾಂಧಿನಗರ ಶಾಲೆಯಲ್ಲಿ ಮತ ಚಲಾಯಿಸಿದರೆ, ಶಾಸಕ ಡಾ.ವೈ.ಭರತ್ ಶೆಟ್ಟಿ ಕೆಪಿಟಿ ಬಳಿ ಇರುವ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಶಾಸಕ ಐವನ್ ಡಿಸೋಜ ಹಾಗೂ ಅವರ ಪತ್ನಿ ಡಾ.ಕವಿತಾ ಡಿಸೋಜ ಇಂದು ಬೆಳಗ್ಗೆ ಜೆಪ್ಪು ಇನ್ಫೆಂಟ್ ಮೇರಿಸ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮಾಜಿ ಶಾಸಕ ಜೆ. ಆರ್.ಲೋಬೊ ಸೈಂಟ್ ಸಬೆಸ್ಟಿಯನ್ ಶಾಲೆಯಲ್ಲಿ ಮತ ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ 92 ವರ್ಷದ ಹಿರಿಯ ಮಹಿಳೆ ಯಜಿನಿ ಕುಲಾಸೊ ತಮ್ಮ ಹಕ್ಕನ್ನು ಚಲಾಯಿಸಿದರು.

448 ಮತಗಟ್ಟೆಗಳಲ್ಲೂ ಮತದಾನ ಆರಂಭಗೊಂಡಿದೆ. ಮಣ್ಣಗುಡ್ಡೆ ಗಾಂಧಿನಗರ ಶಾಲೆಯ ಮತಗಟ್ಟೆಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿರುವುದು ವರದಿಯಾಗಿದೆ.

ಕೋಡಿಕಲ್ ದ.ಕ. ಜಿಪಂ ಮಾದರಿ ಹಿ.ಪ್ರಾ. ಶಾಲೆಯ ಮತಗಟ್ಟೆಯಲ್ಲಿ 86 ವರ್ಷದ ಹಿರಿಯ ಮತದಾರರಾದ ವಿಲಾಸಿನಿ ಭಕ್ತ ಅವರಿಗೆ ಮತದಾನದ ಬಳಿಕ ಮತಗಟ್ಟೆಯಿಂದ ಹಿಂದಿರುಗಲು ಮತಗಟ್ಟೆ ಸಿಬ್ಬಂದಿ ಹೆಗಲು ಕೊಟ್ಟು ಸಹಕರಿಸಿದರು. ಇದೇ ಮತಗಟ್ಟೆಯಲ್ಲಿ ಕಮಲಾ ಎಂಬವರು ಪುತ್ರಿ ಶಿಲ್ಪಾ ಸಹಕಾರದಲ್ಲಿ  ಮತ ಚಲಾಯಿಸಿದರು. ಕೆಎಸ್ಸಾರ್ಟಿಸಿಯಲ್ಲಿ ಹೌಸ್ ಕೀಪಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮಲಾ ಇತ್ತೀಚಿಗೆ ಎಡವಿ ಬಿದ್ದ ಪರಿಣಾಮ ಕೈಕಾಲು ಮೂಳೆ ಮುರಿತಕ್ಕೊಳಗಾಗಿದ್ದರು.

27 ಮಂದಿ ಪಕ್ಷೇತರರ ಸಹಿತ 60 ವಾರ್ಡ್‌ಗಳಲ್ಲಿ 180 ಸ್ಪರ್ಧಿಗಳು ಕಣದಲ್ಲಿದ್ದಾರೆ. ಪ್ರಬಲ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿವೆ. 60 ವಾರ್ಡ್‌ಗಳ 1,99,989 ಪುರುಷರು ಮತ್ತು 1,87,465 ಮಹಿಳೆಯರು ಹಾಗೂ 63 ಇತರರ ಸಹಿತ 3,87,517 ಮತದಾರರರು 180 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ನ.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಮತದಾನಕ್ಕಾಗಿ 448 ಮತಗಟ್ಟೆಗಳನ್ನು ತೆರೆಯಲಾಗಿದ್ದು, 448 ಮತಗಟ್ಟೆ ಅಧಿಕಾರಿಗಳು, 448 ಸಹಾಯಕ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News