ಕರ್ತವ್ಯಲೋಪ: ಉಡುಪಿ ನಗರ ಎಸ್ಸೈ, ಹೆಡ್‌ಕಾನ್‌ಸ್ಟೇಬಲ್ ಅಮಾನತು

Update: 2019-11-12 06:18 GMT

ಉಡುಪಿ, ನ.12: ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನ.2ರಂದು ಗೆಳತಿಯೊಂದಿಗೆ ಮಾತನಾಡುತ್ತಿದ್ದ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಉಡುಪಿ ನಗರ ಠಾಣಾ ಎಸ್ಸೈ ಹಾಗೂ ಹೆಡ್‌ಕಾನ್‌ಸ್ಟೇಬಲ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಉಡುಪಿ ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಅನಂತಪದ್ಮನಾಭ ಹಾಗೂ ಹೆಡ್‌ಕಾನ್‌ಸ್ಟೇಬಲ್ ಒಬ್ಬರು ಅಮಾನತುಗೊಂಡ ಪೊಲೀಸರಾಗಿದ್ದಾರೆ.
ಸ್ನೇಹಿತರಾದ ಆಶೀಸ್, ಶಾನು, ತಾಹಿಮ್ ಮತ್ತು ಶಿವಾನಿ ಎಂಬವರು ನ.2ರಂದು ರಾತ್ರಿ 8 ಗಂಟೆ ಸುಮಾರಿಗೆ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿರುವಾಗ ಸುನೀಲ್ ಪೂಜಾರಿ, ರಾಕೇಶ್ ಸುವರ್ಣ ಮತ್ತು ಇತರರು ಇವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರೆನ್ನಲಾಗಿತ್ತು.

ಇದೇ ವಿಚಾರದಲ್ಲಿ ನ.4ರಂದು ಅಶೀಸ್ ಮತ್ತು ಶಿವಾನಿಯ ಭಾವಚಿತ್ರ ಗಳನ್ನು ಫೇಸ್‌ಬುಕ್‌ನಿಂದ ಡೌನ್‌ಲೋಡ್ ಮಾಡಿ ವಾಟ್ಸಾಪ್‌ನಲ್ಲಿ ಹಾಕಿರುವ ಮತ್ತು ಸ್ನೇಹಿತರೊಂದಿಗೆ ಪಾರ್ಕಿನಲ್ಲಿ ಮಾತಾನಾಡುತ್ತಿರುವಾಗ ಏಕಾಏಕಿ ದೈಹಿಕ ಹಲ್ಲೆ ನಡೆಸಿ ಭಾವಚಿತ್ರಗಳನ್ನು ತೆಗೆದ ಕುರಿತು ನ.5ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಕೃಷ್ಣಾನಂದ ಎಂಬವರು ಈ ಕುರಿತು ಪ್ರತಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣಾ ಎಸ್ಸೈ ಹಾಗೂ ಹೆಡ್‌ಕಾನ್‌ಸ್ಟೇಬಲ್ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಅವರನ್ನು ಜಿಲ್ಲಾ ಎಸ್ಪಿ ಅಮಾನತುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News