ಇನ್ನಷ್ಟು ಆರ್ಥಿಕ ಹಿಂಜರಿತದ ಸುಳಿವು ನೀಡಿದ ಎಸ್‌ಬಿಐ

Update: 2019-11-12 17:54 GMT
ಫೋಟೊ: zeebiz.com

ಹೊಸದಿಲ್ಲಿ,ನ.12: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ವೃದ್ಧಿ ದರವನ್ನು ದಾಖಲಿಸಿದ ಬಳಿಕ ಭಾರತದ ಜಿಡಿಪಿ ವೃದ್ಧಿ ದರವು ದ್ವಿತೀಯ ತ್ರೈಮಾಸಿಕದಲ್ಲಿ ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಎಸ್‌ಬಿಐ ಮಂಗಳವಾರ ಹೇಳಿದೆ.

ಜಾಗತಿಕ ಆರ್ಥಿಕ ಹಿಂಜರಿತ ಮತ್ತು ದೇಶಿಯ ಕಳವಳಗಳ ಹಿನ್ನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ವೃದ್ಧಿ ದರದ ಮುನ್ನಂದಾಜನ್ನು ಹಿಂದಿನ ಶೇ.6.1ರಿಂದ ಶೇ.5ಕ್ಕೆ ತಗ್ಗಿಸಲಾಗಿದೆ. ಮೊದಲ ತ್ರೈಮಾಸಿಕಕ್ಕೆ ಶೇ.5ಕ್ಕೆ ಕುಸಿದಿದ್ದ ವೃದ್ಧಿ ದರವು ವಾಹನಗಳ ಮಾರಾಟ ಕುಸಿತ,ವಿಮಾನಯಾನ ಕಾರ್ಯಾಚರಣೆಗಳಲ್ಲಿ ಇಳಿಕೆ,ಪ್ರಮುಖ ಕ್ಷೇತ್ರಗಳ ನಿರಾಶಾದಾಯಕ ಬೆಳವಣಿಗೆ ಹಾಗೂ ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕ್ಷೀಣಗೊಳ್ಳುತ್ತಿರುವ ಹೂಡಿಕೆಗಳಿಂದಾಗಿ ದ್ವಿತೀಯ ತ್ರೈಮಾಸಿಕದಲ್ಲಿ ಇನ್ನಷ್ಟು ಕುಸಿದು ಶೇ.4.2ರಷ್ಟಾಗಬಹುದು ಎಂದು ಎಸ್‌ಬಿಐ ತನ್ನ ಸಂಶೋಧನಾ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ ತಿಂಗಳಿಗೆ ಕೈಗಾರಿಕಾ ಉತ್ಪಾದನಾ ಸೂಚಿ (ಐಐಪಿ) ಬೆಳವಣಿಗೆಯು ಮೈನಸ್ ಶೇ.4.3ರಷ್ಟಾಗಿರುವುದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ ಎಂದೂ ಅದು ಹೇಳಿದೆ.

 ಆರ್ಥಿಕ ಮಂದಗತಿಯ ಹಿನ್ನೆಲೆಯಲ್ಲಿ ಆರ್‌ಬಿಐ ಡಿಸೆಂಬರ್‌ನಲ್ಲಿ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಡ್ಡಿದರ ಕಡಿತಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದಿರುವ ಎಸ್‌ಬಿಐ,ಹಿಂದಿನ ತಿಂಗಳುಗಳಲ್ಲಿ ಆರ್‌ಬಿಐ ಹಲವಾರು ಬಾರಿ ಬಡ್ಡಿದರಗಳನ್ನು ಕಡಿತಗೊಳಿಸಿದ್ದರೂ ಇಂತಹ ಕ್ರಮಗಳು ಆರ್ಥಿಕತೆಯ ತಕ್ಷಣದ ಪುನಃಶ್ಚೇತನಕ್ಕೆ ನೆರವಾಗುವದಿಲ್ಲ ಎಂದಿದೆ.

ಅಚ್ಚರಿಯ ನೀತಿಗಳ ವಿರುದ್ಧ ಸರಕಾರಕ್ಕೆ ಎಚ್ಚರಿಕೆ ನೀಡಿರುವ ಅದು ಹಣಕಾಸು ನೀತಿಯೊಂದನ್ನೇ ನೆಚ್ಚಿಕೊಂಡಿರುವುದು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.

ಜಾಗತಿಕ ರೇಟಿಂಗ್ ಸಂಸ್ಥೆ ಮೂಡಿಸ್ ಭಾರತದ ಕ್ರೆಡಿಟ್ ರೇಟಿಂಗ್‌ನ್ನು ಸ್ಥಿರದಿಂದ ಋಣಕ್ಕೆ ಬದಲಿಸಿರುವುದು ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ ಎಂದೂ ಎಸ್‌ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News