ವಿಮೆ ಪರಿಹಾರಕ್ಕೆ ಕಾರಿನ ಕೀಗಳೂ ಮುಖ್ಯ ಎನ್ನುವುದು ನಿಮಗೆ ಗೊತ್ತೇ?

Update: 2019-11-13 13:49 GMT
ಫೋಟೋ: unitedlocksmith.net

 ನಿಮ್ಮ ಕಾರು ಕಳ್ಳತನವಾಗಿದ್ದರೆ ನೀವು ವಿಮಾ ಪರಿಹಾರವನ್ನು ಕೋರಿ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ಬಳಿ ಕಾರಿನ ಎಲ್ಲ ಚಾವಿ(ಕೀ)ಗಳಿಲ್ಲದಿದ್ದರೆ ನಿಮ್ಮ ಕೋರಿಕೆ ತಿರಸ್ಕೃತಗೊಳ್ಳಬಹುದು. ನಿಮ್ಮ ಅರ್ಜಿಯನ್ನು ಸಂಸ್ಕರಿಸುವ ಮುನ್ನ ಕಾರಿನ ಎರಡೂ ಚಾವಿಗಳನ್ನು ಒಪ್ಪಿಸುವಂತೆ ಕಂಪನಿಯು ನಿಮಗೆ ಸೂಚಿಸಬಹುದು ಮತ್ತು ನೀವು ಹಾಗೆ ಮಾಡಲು ವಿಫಲಗೊಂಡರೆ ನಿಮಗೆ ಪರಿಹಾರವನ್ನು ತಿರಸ್ಕರಿಸಬಹುದು.

 ನೀವು ಹೊಸ ಕಾರನ್ನು ಖರೀದಿಸಿದಾಗ ನಿಮಗೆ ಎರಡು ಚಾವಿಗಳನ್ನು ನೀಡಲಾಗುತ್ತದೆ. ನಿಮ್ಮ ಕಾರು ಕಳ್ಳತನವಾದಾಗ ಮತ್ತು ಅದು ನಿಮಗೆ ವಾಪಸ್ ದೊರೆಯುವ ಸಾಧ್ಯತೆ ಇಲ್ಲದಿದ್ದಾಗ ನಿಮ್ಮ ಬಳಿಯಲ್ಲಿರುವ ಚಾವಿಗಳಲ್ಲೊಂದು ಕಳೆದು ಹೋಗಿದ್ದರೆ ನಿಮಗೆ ವಿಮಾ ಪರಿಹಾರವೂ ದೊರೆಯದಿರಬಹುದು. ಹೀಗಾಗಿ ಕಾರು ಕಳ್ಳತನವಾಗಿದ್ದರೆ ಮತ್ತು ವಿಮಾ ಪರಿಹಾರಕ್ಕೆ ಕೋರಿಕೆ ಸಲ್ಲಿಸುವಾಗ ಎರಡೂ ಚಾವಿಗಳು ನಿಮ್ಮ ಬಳಿಯಿರಬೇಕು. ಆದರೆ ಪರಿಹಾರ ಕೋರಿಕೆಯನ್ನು ಸ್ವೀಕರಿಸುವ ಮುನ್ನ ವಿಮಾ ಕಂಪನಿಯು ಕಾರಿನ ಎರಡೂ ಚಾವಿಗಳನ್ನು ಕೇಳುವುದನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಅರ್‌ಡಿಎಐ)ವು ಕಡ್ಡಾಯಗೊಳಿಸಿಲ್ಲ.

ಕಂಪನಿಯು ಎರಡೂ ಚಾವಿಗಳನ್ನೇಕೆ ಕೇಳುತ್ತದೆ ?

ನಿಮ್ಮ ಕಾರಿನ ವಿಮಾ ಪಾಲಿಸಿಯು ಕಳ್ಳತನವನ್ನು ಒಳಗೊಂಡಿರುತ್ತದೆಯೇ ಹೊರತು ನಿಮ್ಮ ಅಜಾಗ್ರತೆಯನ್ನಲ್ಲ. ನೀವು ಕಾರಿನ ಚಾವಿಯನ್ನು ಅದರಲ್ಲಿಯೇ ಬಿಟ್ಟು ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದ್ದರೆ ಅದನ್ನು ನಿಮ್ಮ ಅಜಾಗ್ರತೆ ಎಂದು ವಿಮಾ ಕಂಪನಿಯು ಪರಿಗಣಿಸುತ್ತದೆ. ಎರಡೂ ಚಾವಿಗಳನ್ನು ಸಲ್ಲಿಸಿದಾಗ ನೀವು ಅಜಾಗ್ರತೆಯಿಂದಿರಲಿಲ್ಲ ಎನ್ನುವುದು ಸಾಬೀತಾಗುತ್ತದೆ. ಅಲ್ಲದೆ ನೀವು ವಿಮಾ ಕಂಪನಿಯನ್ನು ವಂಚಿಸುವ ಉದ್ದೇಶವನ್ನು ಹೊಂದಿಲ್ಲ ಎನ್ನುವುದಕ್ಕೂ ಇದು ಪುರಾವೆಯಾಗುತ್ತದೆ.

ಕಾರು ಕಳ್ಳತನವಾಗಲು ನಿಮ್ಮ ಅಜಾಗ್ರತೆ ಕಾರಣವಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಿಮಾ ಕಂಪನಿಗಳು ಈ ಕ್ರಮವನ್ನು ಅನುಸರಿಸುತ್ತವೆ. ನೀವು ಚಾವಿಯನ್ನು ಕಾರಿನಲ್ಲಿಯೇ ಬಿಟ್ಟಿದ್ದರೆ ಮತ್ತು ಕಿಟಕಿಗಳನ್ನು ತೆರೆದಿಟ್ಟು ಬಾಗಿಲುಗಳನ್ನು ಲಾಕ್ ಮಾಡಿರದಿದ್ದರೆ ಇಂತಹ ಸಂದರ್ಭದಲ್ಲಿ ಕಳ್ಳತನ ಸಂಭವಿಸಿದ್ದರೆ ವಿಮೆ ಪರಿಹಾರದ ಕೋರಿಕೆಯನ್ನು ಕಂಪನಿಗಳು ಮಾನ್ಯ ಮಾಡುವುದಿಲ್ಲ. ನೀವು ಕಳ್ಳತನವಾದ ಕಾರಿನ ಎಲ್ಲ ಚಾವಿಗಳನ್ನು ಒಪ್ಪಿಸಿದರೆ ಕಂಪನಿಯು ಪ್ರಕರಣದ ತನಿಖೆಯನ್ನು ನಡೆಸಿ ಪಾಲಿಸಿಯಲ್ಲಿನ ಷರತ್ತಿಗೆ ಅನುಗುಣವಾಗಿ ವಿಮಾ ಪರಿಹಾರವನ್ನು ಪಾವತಿಸುತ್ತದೆ.

ವಾಹನದ ವಿಮೆಯಿರಲಿ,ಜೀವವಿಮೆಯಿರಲಿ...ಹೆಚ್ಚಿನವರು ಪಾಲಿಸಿಯಲ್ಲಿನ ಷರತ್ತುಗಳನ್ನು ಓದುವ ಗೋಜಿಗೆ ಹೋಗುವುದಿಲ್ಲ. ಪಾಲಿಸಿಯ ನಿಬಂಧನೆಗಳಂತೆ ಯಾವುದೇ ಸಂದರ್ಭದಲ್ಲಿ ವಾಹನಕ್ಕೆ ಯಾವುದೇ ನಷ್ಟ ಸಂಭವಿಸದಂತೆ ಮಾಲಿಕನು ಅಗತ್ಯ ಕ್ರಮಗಳನ್ನು ವಹಿಸಬೇಕಾಗುತ್ತದೆ. ಆದ್ದರಿಂದ ಕಾರಿನ ಸುರಕ್ಷತೆಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ವಹಿಸಿರದಿದ್ದರೆ ಅದನ್ನು ನಿಮ್ಮ ಅಜಾಗ್ರತೆಯೆಂದು ಕಂಪನಿಯು ಪರಿಗಣಿಸುತ್ತದೆ ಮತ್ತು ನಿಮ್ಮ ಕಾರಿನ ಎರಡೂ ಚಾವಿಗಳನ್ನು ಸಲ್ಲಿಸುವಲ್ಲಿ ವೈಫಲ್ಯವೂ ಈ ಷರತ್ತಿನಡಿ ಬರುತ್ತದೆ.

ಕಾರು ಕಳ್ಳತನವಾದಾಗ ವಿಮಾ ಪರಿಹಾರವನ್ನು ಕೋರುವ ಸಂದರ್ಭದಲ್ಲಿ ಕಾರಿನ ಎಲ್ಲ ಚಾವಿಗಳನ್ನು,ಇಲ್ಲದಿದ್ದರೆ ಕನಿಷ್ಠ ಒಂದು ಚಾವಿಯನ್ನು,ಎಫ್‌ಐಆರ್ ಪ್ರತಿ ಮತ್ತು ಕಾರು ಪತ್ತೆಯಾಗಿಲ್ಲ ಎಂಬ ಪೊಲೀಸರ ವರದಿಯನ್ನು ಕಂಪನಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಇದು ನಿಜವಾಗಿಯೂ ಕಳ್ಳತನದ ಪ್ರಕರಣವಾಗಿದೆ ಮತ್ತು ವಂಚನೆಯ ಉದ್ದೇಶವಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಿಮಾ ಕಂಪನಿಗಳು ಎಲ್ಲ ಅಸಲಿ ಚಾವಿಗಳನ್ನು ಸಲ್ಲಿಸುವಂತೆ ಸೂಚಿಸುತ್ತವೆ.

ಅದೇ ಮಾಡೆಲ್‌ನ ಬೇರೆ ಕಾರಿನ ಚಾವಿ ಸಲ್ಲಿಸುವ ಪ್ರಯತ್ನ ಬೇಡ

 ಕಳ್ಳತನವಾದ ಸಂದರ್ಭದಲ್ಲಿ ಕಾರಿನ ಒಂದು ಅಥವಾ ಎರಡೂ ಚಾವಿಗಳು ನಿಮ್ಮ ಬಳಿ ಇಲ್ಲದಿದ್ದರೆ? ಇಂತಹ ಸಂದರ್ಭದಲ್ಲಿ ಕೆಲವು ಅತಿ ಬುದ್ಧಿವಂತರು ವಿಮಾ ಕೋರಿಕೆಯನ್ನು ಕಂಪನಿಯು ಸ್ವೀಕರಿಸುವಂತಾಗಲು ಕಳ್ಳತನವಾಗಿರುವ ಕಾರಿನದೇ ಮಾಡೆಲ್‌ನ ಇನ್ನೊಂದು ಕಾರಿನ ಚಾವಿಗಳನ್ನು ಸಲ್ಲಿಸುವ ಐಡಿಯಾ ಮಾಡಬಹುದು. ಸಾಮಾನ್ಯವಾಗಿ ಒಂದು ನಿರ್ದಿಷ್ಟ ಬ್ರಾಂಡ್/ಮಾಡೆಲ್‌ನ ಕಾರುಗಳ ಚಾವಿಗಳ ವಿನ್ಯಾಸ ಒಂದೇ ರೀತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ತನಗೆ ಸಲ್ಲಿಸಲಾಗಿರುವ ಚಾವಿಗಳು ಕಳ್ಳತನವಾಗಿರುವ ಕಾರಿನದ್ದೇ ಎನ್ನುವುದನ್ನು ಕಂಪನಿಯು ಹೇಗೆ ನಿರ್ಧರಿಸುತ್ತದೆ ?

ವಿಮಾ ಪರಿಹಾರಕ್ಕೆ ಹಕ್ಕು ಕೋರಿಕೆಗಳನ್ನು ವಿವಿಧ ವಿವರಗಳು ಮತ್ತು ಸಾಂದರ್ಭಿಕ ಮತ್ತು ಮೌಖಿಕ ಸಾಕ್ಷಗಳು,ಲಿಖಿತ ಹೇಳಿಕೆಗಳು,ತನಿಖೆ,ಪೊಲೀಸ್ ವರದಿ ಇತ್ಯಾದಿಗಳನ್ನು ಆಧಾರವಾಗಿಟ್ಟುಕೊಂಡು ನಿಷ್ಕರ್ಷಿಸಲಾಗುತ್ತದೆ. ಕೋರಿಕೆಯ ಜೊತೆಗೆ ಸಲ್ಲಿಸಿರುವ ಚಾವಿಗಳ ಕುರಿತು ನಿಮ್ಮ ಕಾರಿನ ಬಳಕೆಯ ಆಧಾರದಲ್ಲಿ ನಿರ್ಧಾರದಲ್ಲಿ ನಿರ್ಣಯಕ್ಕೆ ಬರಲಾಗುತ್ತದೆ ಮತ್ತು ಆರಂಭಿಕ ಘೋಷಣೆಗಳು/ಹೇಳಿಕೆಗಳು/ಪರಿಶೀಲನೆಯಲ್ಲಿ ಕಂಡು ಬಂದಿರುವ ಅಂಶಗಳು ಇವುಗಳ ಆಧಾರದಲ್ಲಿ ದೃಢಪಡಿಸಿಕೊಳ್ಳಲಾಗುತ್ತದೆ.

ಹೀಗಾಗಿ ವಿಮಾ ಪರಿಹಾರವನ್ನು ದಕ್ಕಿಸಿಕೊಳ್ಳಲು ನಕಲಿ ಚಾವಿಗಳನ್ನು ಕಂಪನಿಗೆ ಸಲ್ಲಿಸುವ ಪ್ರಯತ್ನಗಳು ಬೇಡ. ಉದಾಹರಣೆಗೆ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸರು ಕಾರನ್ನು ಪತ್ತೆ ಹಚ್ಚಿದರೆ ಮತ್ತು ನೀವು ಸಲ್ಲಿಸಿರುವ ಚಾವಿಗಳು ಆ ಕಾರಿನಲ್ಲಿ ಕೆಲಸ ಮಾಡುವುದಿಲ್ಲ ಎನ್ನುವುದು ಕಂಪನಿಗೆ ಗೊತ್ತಾದರೆ ನಕಲಿ ಚಾವಿಗಳನ್ನು ಸಲ್ಲಿಸಿದ್ದಕ್ಕಾಗಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಇದು ನಿಮ್ಮ ಗಮನದಲ್ಲಿರಲಿ

ನೀವು ಸಾಮಾನ್ಯವಾಗಿ ಕಾರಿನ ಒಂದೇ ಚಾವಿಯನ್ನು ಬಳಸುತ್ತೀರಿ ಮತ್ತು ಅದಕ್ಕೆ ಹಾನಿಯಾದಾಗ,ಕಳೆದು ಹೋದಾಗ ಅಥವಾ ಬಳಸಲಾಗದಷ್ಟು ಸವೆದಿದ್ದರೆ ಇನ್ನೊಂದು ಚಾವಿಯನ್ನು ಬಳಸುತ್ತೀರಿ.

ನಿಮ್ಮ ಮೊದಲ ಚಾವಿ ಸವೆದಿದ್ದರೆ ಅದನ್ನು ಎಸೆಯದೆ ಸುರಕ್ಷಿತವಾಗಿಡಿ. ಇದು ಕಾರು ಕಳ್ಳತನವಾದಾಗ ವಿಮಾ ಕೋರಿಕೆಯನ್ನು ಸಲ್ಲಿಸುವಾಗ ನೆರವಾಗುತ್ತದೆ.

ವಿಮೆ ಮಾಡಿಸುವಾಗಲೇ ಕಾರ್ ಕೀ ರಿಪ್ಲೇಸ್‌ಮೆಂಟ್ ಇನ್ಶೂರನ್ಸ್ ಷರತ್ತನ್ನೂ ಸೇರಿಸಿಕೊಳ್ಳಿ. ಎಫ್‌ಒಬಿ ಕೀಗಳನ್ನು ಹೊರತುಪಡಿಸಿದರೆ ಡುಪ್ಲಿಕೇಟ್ ಚಾವಿಗಳನ್ನು ಮಾಡಿಸುವುದು ಹೆಚ್ಚು ವೆಚ್ಚದಾಯಕವೇನಲ್ಲ. ಆದರೆ ನೀವು ಕೇವಲ ಡುಪ್ಲಿಕೇಟ್ ಚಾವಿಯನ್ನು ಮಾಡಿಸಿದ್ದರೆ ನಿಮ್ಮ ಕಳೆದುಹೋಗಿರುವ ಚಾವಿಯ ದುರ್ಬಳಕೆಯ ಅಪಾಯವನ್ನು ಎದುರಿಸುತ್ತಿರುತ್ತೀರಿ. ಅಲ್ಲದೆ ಚಾವಿ ತಯಾರಕನಲ್ಲಿ ನಿಮ್ಮ ಮೂಲಚಾವಿಯ ಪ್ರಿಂಟ್ ಇರುವುದರಿಂದ ಸುರಕ್ಷತೆಗೆ ಅಪಾಯವಂತೂ ಇದ್ದೇ ಇರುತ್ತದೆ. ಹೀಗಾಗಿ ಕಾರ್ ಲಾಕ್‌ಸೆಟ್ ಅನ್ನೇ ಬದಲಿಸುವುದು ಉತ್ತಮ ಆಯ್ಕೆಯಾಗುತ್ತದೆ. ಇದು ದುಬಾರಿಯಾದರೂ ಇಂತಹ ಸಂದರ್ಭಗಳಲ್ಲಿ ನೀವು ಮಾಡಿಸಿರುವ ಕೀ ರಿಪ್ಲೇಸ್‌ಮೆಂಟ್ ಇನ್ಶೂರನ್ಸ್ ಕೆಲಸಕ್ಕೆ ಬರುತ್ತದೆ.

ನೀವು ಕಾರಿನ ಚಾವಿಯನ್ನು ಕಳೆದುಕೊಂಡಿದ್ದರೆ ಆ ಬಗ್ಗೆ ಪೊಲೀಸ್ ದೂರನ್ನು ಸಲ್ಲಿಸುವುದು ಮತ್ತು ಲಾಕ್ ಸೆಟ್‌ನ್ನು ಬದಲಿಸದೇ ಡುಪ್ಲಿಕೇಟ್ ಚಾವಿಯನ್ನು ಮಾಡಿಸುವುದಿದ್ದರೆ ಅದಕ್ಕೂ ಮುನ್ನ ವಿಮಾ ಕಂಪನಿಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಎನ್ನುವುದೂ ನಿಮ್ಮ ಗಮನದಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News