ಸುಪ್ರೀಂ ತೀರ್ಪಿನಿಂದ ಬಿಜೆಪಿಯ ‘ಆಪರೇಶನ್ ಕಮಲ’ ಬಹಿರಂಗ: ಕಾಂಗ್ರೆಸ್

Update: 2019-11-13 15:30 GMT

ಹೊಸದಿಲ್ಲಿ, ನ. 13: ಕರ್ನಾಟಕದಲ್ಲಿರುವ ಯಡಿಯೂರಪ್ಪ ಸರಕಾರವನ್ನು ವಜಾಗೊಳಿಸುವಂತೆ ಬುಧವಾರ ಆಗ್ರಹಿಸಿರುವ ಕಾಂಗ್ರೆಸ್, 17 ಕಾಂಗ್ರೆಸ್, ಜೆಡಿಎಸ್ ಶಾಸಕರ ಅನರ್ಹತೆ ಎತ್ತಿ ಹಿಡಿದಿರುವ ಹಾಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವ ಸುಪ್ರೀಂ ಕೋರ್ಟ್‌ನ ನಿರ್ಧಾರ ರಾಜ್ಯದಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ವನ್ನು ಬಹಿರಂಗಪಡಿಸಿದೆ ಎಂದಿದೆ.

ಕರ್ನಾಟಕದ 15ನೇ ವಿಧಾನ ಸಭೆಯ ಅಂತ್ಯದ ವರೆಗೆ ಶಾಸಕರನ್ನು ಅನರ್ಹಗೊಳಿಸಿದ ಆಗಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೀಡಿದ ಆದೇಶದ ಒಂದು ಭಾಗವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಅವರು ಆಯ್ಕೆಯಾದರೆ ಮತ್ತೆ ಶಾಸಕರಾಗಬಹುದು ಎಂದು ಹೇಳಿದೆ.

 ‘‘ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದಲ್ಲಿ ಬಿಜೆಪಿಯ ಆಪರೇಷನ್ ಕಮಲವನ್ನು ಬಹಿರಂಗಗೊಳಿಸಿದೆ. ಸಂವಿಧಾನ ಹಾಗೂ ಕಾನೂನು ವಿಚಾರದಲ್ಲಿ ಯಡಿಯೂರಪ್ಪ ಅವರದ್ದು ಕಾನೂನುಬಾಹಿರ ಸರಕಾರ. ಆದುದರಿಂದ ಆ ಸರಕಾರವನ್ನು ಕೂಡಲೇ ವಜಾಗೊಳಿಸಬೇಕು’’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಸಾರ್ವಜನಿಕ ಅಭಿಪ್ರಾಯಗಳು ಹಾಗೂ ಪ್ರಜಾಸತ್ತಾತ್ಮಕ ವೌಲ್ಯಗಳು ಯಡಿಯೂರಪ್ಪ ಅವರ ಕಾನೂನುಬಾಹಿರ ಸರಕಾರವನ್ನು ವಜಾಗೊಳಿಸಬೇಕು ಎಂದು ಮಾತ್ರ ಆಗ್ರಹಿಸುತ್ತಿಲ್ಲ. ಬದಲಾಗಿ ಶಾಸಕರ ಹಣ ಬಲದ ಆಧಾರದಲ್ಲಿ ಚುನಾಯಿತ ಸರಕಾರವನ್ನು ಕೇಳಗಿಳಿಸುವಲ್ಲಿನ ಬಿಜೆಪಿ ಪಿತೂರಿಯ ಬಗ್ಗೆ ಕೂಡ ತನಿಖೆ ನಡೆಸಬೇಕು ಎಂದು ಬೇಡಿಕೆ ಇರಿಸಿದೆ ಎಂದು ಸುರ್ಜೇವಾಲ ಹೇಳಿದರು.

 “ಯಡಿಯೂರಪ್ಪ ಅವರ ಅಡಿಯೊದ ತನಿಖೆ ನಡೆಸಬೇಕಾದ ಅಗತ್ಯ ಇದೆ. ಈ ಎಲ್ಲ ಕಪ್ಪು ಹಣ ಎಲ್ಲಿಂದ ಬಂತು ? ಇದರಲ್ಲಿ ಬಿಜೆಪಿ ನಾಯಕತ್ವದ ಪಾತ್ರ ಏನು ?” ಎಂದು ಅವರು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಹಣ ಬಲದಿಂದ ನಾಚಿಕೆಯಿಲ್ಲದ ಆಟದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಜೆಪಿ ನಾಶಪಡಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಸ್ಪೀಕರ್ ಅವರ ನಿಲುವನ್ನು ಶೇ. 95ರಷ್ಟು ಸಮರ್ಥಿಸುತ್ತದೆ. ಆಪರೇಶನ್ ಕಮಲ ದೇಶದ ಎಲ್ಲೆಡೆ ಪ್ರತಿ ದಿನ ನಡೆಯುತ್ತದೆ ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News