ಪ್ರೊಫೆಸರ್ ಗಳ ಕಿರುಕುಳದಿಂದ ಐಐಟಿ ವಿದ್ಯಾರ್ಥಿನಿ ಫಾತಿಮಾ ಆತ್ಮಹತ್ಯೆ: ಆರೋಪ

Update: 2019-11-13 15:48 GMT

ಚೆನ್ನೈ,ನ.3: ಐಐಟಿ ಮದ್ರಾಸ್‌ನ ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆಯ ಮೂರು ದಿನಗಳ ಬಳಿಕ ಆಕೆಯ ಕುಟುಂಬಿಕರು, ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ವಿದ್ಯಾರ್ಥಿನಿ ಫಾತಿಮಾ ಲತೀಫ್‌ರ ಸಾವಿಗೆ ಪ್ರೊಫೆಸರ್‌ಗಳ ಕಿರುಕುಳವೇ ಕಾರಣವೆಂದು ಅವರು ಆರೋಪಿಸಿದ್ದಾರೆ.

ಕೇರಳ ಮೂಲದ ಫಾತಿಮಾ ಆಗಸ್ಟ್‌ನಲ್ಲಿ ಐಐಟಿ ಮದ್ರಾಸ್‌ನಲ್ಲಿ ಮಾನವಿಕಶಾಸ್ತ್ರ ಹಾಗೂ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು.

 ತನ್ನ ಮಗಳ ಸಾವಿನ ಬಗ್ಗೆ ನ್ಯಾಯಯುತವಾದ ತನಿಖೆಯನ್ನು ನಡೆಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆಕೆಯ ತಂದೆ ಅಬ್ದುಲ್ ಲತೀಫ್ ಆಪಾದಿಸಿದ್ದಾರೆ ಹಾಗೂ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

 ‘‘ಕಿರುಕುಳದಿಂದ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದಕ್ಕೆ ನನ್ನ ಬಳಿ ದಾಖಲೆಗಳಿವೆ. ಫಾತಿಮಾಳಿಗೆ ನ್ಯಾಯ ದೊರೆಯಬೇಕಾಗಿದೆ. ಆಕೆಯ ಸಾವಿಗೆ ಮೂವರು ಪ್ರೊಫೆಸರ್‌ಗಳು ಕಾರಣರಾಗಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ನಾನು ಬಯಸುತ್ತೇನೆ’’ ಎಂದು ಲತೀಫ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

   ಆದರೆ ನಾವು ನೀಡಿದ ದೂರಿಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ನಮಗೆ ಅವರು ನೆರವು ನೀಡುತ್ತಿಲ್ಲ. ಪ್ರಕರಣದ ಬಗ್ಗೆ ನ್ಯಾಯಯುತವಾದ ತನಿಖೆಯಾಗದಿದ್ದಲ್ಲಿ ಸುಪ್ರೀಂಕೋರ್ಟ್‌ಗೂ ಹೋಗಲು ತಾನು ಇಚ್ಛಿಸುತ್ತೇನೆ’’ಎಂದು ಲತೀಫ್ ಹೇಳಿದ್ದಾರೆ.

 ಫಾತಿಮಾಳ ನಿಧನದ ಒಂದು ದಿನದ ಬಳಿಕವೂ ಪೊಲೀಸರು ತನಿಖೆಯನ್ನು ಆರಂಭಿಸಲಿಲ್ಲ. ಫಾತಿಮಾ ಅವರ ಮೊಬೈಲ್‌ನಲ್ಲಿ ಡೆತ್ ನೋಟ್ ದೊರೆತಿದ್ದು, ತನ್ನ ಸಾವಿಗೆ ಪ್ರೊಫೆಸರ್ ಕಾರಣವೆಂದು ಆದರಲ್ಲಿ ಆಕೆ ದೂರಿದ್ದಳೆಂದು ಲತೀಫ್ ಹೇಳಿದ್ದಾರೆ. ಫಾತಿಮಾಳ ನಿಧನದ ಮರುದಿನ ಆಕೆಯ ಸಹೋದರಿ ಪೊಲೀಸ್‌ ಠಾಣೆಗೆ ಹೋದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಡೆತ್‌ನೋಟ್ ಪತ್ತೆ ಹಚ್ಚಿದ್ದಳು ಎಂದು ಅವರು ತಿಳಿಸಿದ್ದಾರೆ.

   ಘಟನೆ ನಡೆದಾಗಿನಿಂದ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದೆ. ಡೆತ್‌ನೋಟ್‌ನ ದೃಢೀಕರಣಕ್ಕಾಗಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳ ಕಳುಹಿಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೋರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಫಾತಿಮಾಳ ಆತ್ಮಹತ್ಯೆಗೆ ಸಂಬಂಧಿಸಿ ಈವರೆಗೆ ನಾಲ್ವರು ಪ್ರೊಫೆಸರ್ ಹಾಗೂ ಸ್ನೇಹಿತರು ಸೇರಿದಂತೆ 11 ಮಂದಿಯನ್ನು ಪೊಲೀಸರು ಪ್ರಶ್ನಿಸಲಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News