‘ನಗರ ಪ್ರದೇಶದಲ್ಲಿ ‘ಗೋವು ಹಾಸ್ಟೆಲ್’ ನಿರ್ಮಿಸಿ’: ನಗರಾಭಿವೃದ್ಧಿ ಸಚಿವಾಲಯಕ್ಕೆ ಗೋವು ಆಯೋಗ ಸಲಹೆ

Update: 2019-11-13 15:48 GMT

ಹೊಸದಿಲ್ಲಿ, ನ. 13: ಪ್ರತಿ ನಗರ ಅಥವಾ ನಗರ ಪ್ರದೇಶದಲ್ಲಿ ‘ಗೋವು ಹಾಸ್ಟೆಲ್’ಗಳಿಗಾಗಿ 10ರಿಂದ 15 ನಿರ್ದಿಷ್ಟ ಮೀಸಲು ಪ್ರದೇಶವನ್ನು ನೀಡುವ ಪ್ರಸ್ತಾವವನ್ನು ಗೋವುಗಳ ಸಂರಕ್ಷಣೆ ಹಾಗೂ ಅವುಗಳ ಸಂತತಿ ಅಭಿವೃದ್ಧಿಗೆ ಈ ವರ್ಷದ ಆರಂಭದಲ್ಲಿ ರೂಪಿಸಲಾದ ರಾಷ್ಟ್ರೀಯ ಕಾಮಧೇನು ಆಯೋಗ (ನ್ಯಾಷನಲ್ ಕೌ ಕಮಿಷನ್) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮುಂದಿರಿಸಿದೆ.

ಇದು ನಗರದ ನಿವಾಸಿಗಳಿಗೆ ಹಾಲು ಮಾತ್ರವಲ್ಲದೆ, ಆದಾಯವನ್ನು ಕೂಡ ಒದಗಿಸಲಿದೆ. ‘‘ದೇಶಾದ್ಯಂತದ ನಗರ ಯೋಜನೆ ವಿನ್ಯಾಸದಲ್ಲಿ ಸಂಯೋಜಿಸಬಹುದಾದ ಗೋವು ಹಾಸ್ಟೆಲ್‌ಗಳಿಗೆ ಮಾರ್ಗಸೂಚಿಗಳನ್ನು ರೂಪಿಸುವಂತೆ ನಗರಾಭಿವೃದ್ಧಿ ಸಚಿವಾಲಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ’’ ಎಂದು ಆಯೋಗದ ಅಧ್ಯಕ್ಷ ಹಾಗೂ ಗುಜರಾತ್‌ನ ಬಿಜೆಪಿ ಸಂಸದ ವಲ್ಲಭಾಭಾಯಿ ಕಥಿರಿಯಾ ತಿಳಿಸಿದ್ದಾರೆ.

ಬೀಡಾಡಿ ದನಗಳ ಪಿಡುಗು ತಡೆಗಟ್ಟಲು ಗ್ರಾಮದ ಸಮೀಪ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಗೋವು ಶಾಲೆಗಳನ್ನು ಆರಂಭಿಸಲು ಇತ್ತೀಚೆಗೆ ಆಯೋಗಕ್ಕೆ ಸಲಹೆ ನೀಡಲಾಗಿತ್ತು. ನಗರ ಪ್ರದೇಶಗಳಲ್ಲಿ ಗೋವುಗಳನ್ನು ಸಾಕಲು ಜನರಿಗೆ ಜಾಗದ ಸಮಸ್ಯೆಯಾಗುತ್ತಿದೆ. ಆದುದರಿಂದ ‘ಗೋವು ಹಾಸ್ಟೆಲ್’ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ‘ಗೋವು ಹಾಸ್ಟೆಲ್’ಗಳಲ್ಲಿ 20ರಿಂದ 25 ಜನರಿಗೆ ಅವಕಾಶ ನೀಡಲಾಗುವುದು. ಜನರು ನಿರ್ವಹಣಾ ವೆಚ್ಚ ನೀಡಿ ಇಲ್ಲಿ ಗೋವುಗಳನ್ನು ಸಾಕಬಹುದು ಹಾಗೂ ಅದರ ಹಾಲು ಕರೆಯಬಹುದು. ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಈ ‘ಗೋವು ಹಾಸ್ಟೆಲ್’ ಪ್ರಯೋಗ ಯಶಸ್ವಿಯಾಗಿದೆ ಎಂದು ಕಥಿರಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News