ವಿದ್ಯಾರ್ಥಿಗಳ ಪ್ರತಿಭಟನೆಯ ಬಿಸಿ: ತಗ್ಗಿದ ಜೆಎನ್‌ಯು ಹಾಸ್ಟೆಲ್ ಶುಲ್ಕ

Update: 2019-11-13 16:00 GMT
ಫೋಟೋ: PTI

ಹೊಸದಿಲ್ಲಿ,ನ.13: ಹಾಸ್ಟೆಲ್ ಶುಲ್ಕದಲ್ಲಿ ತೀವ್ರ ಏರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ನಡುವೆಯೇ ಕೇಂದ್ರ ಶಿಕ್ಷಣ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯಂ ಅವರು,ಜೆಎನ್‌ಯು ಕಾರ್ಯಕಾರಿ ಸಮಿತಿಯು ಹಾಸ್ಟೆಲ್ ಶುಲ್ಕ ಏರಿಕೆಯಲ್ಲಿ ‘ಭಾರಿ ಕಡಿತ ’ವನ್ನು ಮಾಡಿದೆ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲುಎಸ್)ಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಹಣಕಾಸು ನೆರವನ್ನು ಒದಗಿಸಲು ಯೋಜನೆಯೊಂದನ್ನೂ ಪ್ರಸ್ತಾಪಿಸಿದೆ ಎಂದು ಬುಧವಾರ ಟ್ವೀಟಿಸಿದ್ದಾರೆ.

ಈ ಪ್ರಕಟಣೆಯ ಬೆನ್ನಲ್ಲೇ ಜೆಎನ್‌ಯು ಕುಲಪತಿ ಎಂ.ಜಗದೀಶ ಕುಮಾರ ಅವರು,ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸುವಂತೆ ವಿದ್ಯಾರ್ಥಿಗಳಿಗೆ ಟ್ವಿಟರ್‌ನಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

ಕೇಂದ್ರ ಸರಕಾರದ ಪ್ರಕಟಣೆಗೆ ಪ್ರತಿಕ್ರಿಯಿಸಿದ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಉಪಾಧ್ಯಕ್ಷ ಸಾಕೇತ ಮೂನ್ ಅವರು,‘ ಪ್ರತಿಭಟನೆಯು ಮುಂದುವರಿಯಲಿದೆ. ಶುಲ್ಕ ಏರಿಕೆಯನ್ನು ಸಂಪೂರ್ಣವಾಗಿ ಹಿಂದೆಗೆದುಕೊಳ್ಳಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ನಾವು ಕುಲಪತಿಗಳೊಡನೆ ಮಾತುಕತೆ ನಡೆಸಲು ಬಯಸಿದ್ದೇವೆ. ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗಾಗಿ ಯೋಜನೆಯ ವಿವರಗಳನ್ನೂ ಅವರು ನಮಗೆ ನೀಡಬೇಕು ’ಎಂದು ಹೇಳಿದರು.

 ಪ್ರತಿಭಟನೆಗಳ ಬಳಿಕ ಶುಲ್ಕ ಹೆಚ್ಚಳವನ್ನು ಗಣನೀಯವಾಗಿ ತಗ್ಗಿಸಲಾಗಿದೆಯಾದರೂ ಅದು ಈಗಲೂ ವಿದ್ಯಾರ್ಥಿಗಳು ಹಾಲಿ ಪಾವತಿಸುತ್ತಿರುವ ಹಾಸ್ಟೆಲ್ ಶುಲ್ಕಕ್ಕಿಂತ ಹಲವಾರು ಪಟ್ಟು ಹೆಚ್ಚಾಗಿದೆ. ಉದಾಹರಣೆಗೆ ಸಿಂಗಲ್ ರೂಮ್‌ಗೆ ಮಾಸಿಕ 20 ರೂ.ಶುಲ್ಕವನ್ನು 600 ರೂ.ಗೆ ಹೆಚ್ಚಿಸಲಾಗಿತ್ತು,ಪ್ರತಿಭಟನೆಯ ಬಳಿಕ ಅದನ್ನು 200 ರೂ.ಗೆ ಇಳಿಸಲಾಗಿದೆ. ಡಬಲ್ ರೂಮಿಗೆ ಉದ್ದೇಶಿತ 300 ರೂ.ಮಾಸಿಕ ಶುಲ್ಕವನ್ನು 100 ರೂ.ಗೆ ತಗ್ಗಿಸಲಾಗಿದೆ.

ಕೇಂದ್ರದ ಕ್ರಮವು ವಿದ್ಯಾರ್ಥಿಗಳ ದಾರಿ ತಪ್ಪಿಸುವ ಪ್ರಯತ್ನವಾಗಿದೆ. ತನ್ನ ಮುಖವನ್ನುಳಿಸಿಕೊಳ್ಳಲು ಮತ್ತು ಸುಳ್ಳು ಕಥೆಯನ್ನು ಸೃಷ್ಟಿಸಲು ಜೆಎನ್‌ಯು ಆಡಳಿತವು ಮೋದಿ ಸರಕಾರದೊಂದಿಗೆ ಶಾಮೀಲಾಗಿ ವಿದ್ಯಾರ್ಥಿಗಳನ್ನು ಮತ್ತು ಈ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಜೆಎನ್‌ಯು ಶಿಕ್ಷಕರೋರ್ವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News