ಆಧಾರ್ ಸೇರಿದಂತೆ 19 ಹಣಕಾಸು ಮಸೂದೆಗಳು ಸರ್ವೋಚ್ಚ ನ್ಯಾಯಾಲಯದಿಂದ ಪರಿಶೀಲನೆಯಲ್ಲಿ

Update: 2019-11-13 16:02 GMT

ಹೊಸದಿಲ್ಲಿ,ನ.13: ಹಣಕಾಸು ಕಾಯ್ದೆಯಡಿ 19 ಮಸೂದೆಗಳನ್ನು ಹಣಕಾಸು ಮಸೂದೆಗಳನ್ನಾಗಿ ಪರಿಗಣಿಸುವ ಕೇಂದ್ರದ ನಿರ್ಧಾರವು ಸರ್ವೋಚ್ಚ ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಇವುಗಳನ್ನು ಹಣಕಾಸು ಮಸೂದೆಗಳನ್ನಾಗಿ ಪರಿಗಣಿಸಲು ಅವಕಾಶ ನೀಡಿರುವ ಸ್ಪೀಕರ್ ನಿರ್ಧಾರವನ್ನು ಈಗ ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಲಾಗಿದೆ.

ಮಸೂದೆಯೊಂದನ್ನು ಹಣಕಾಸು ಮಸೂದೆ ಎಂದು ಪ್ರಮಾಣೀಕರಿಸಬೇಕಾದ ಸ್ಪೀಕರ್ ನಿರ್ಧಾರವು ಸರಿಯೇ ಎನ್ನುವುದರ ಬಗ್ಗೆ ಪೀಠವು ನಿರ್ಣಯವನ್ನು ಕೈಗೊಳ್ಳಲಿದೆ. ಸರ್ವೋಚ್ಚ ನ್ಯಾಯಾಲಯವು ಸ್ಪೀಕರ್ ನಿರ್ಧಾರವನ್ನು ತಳ್ಳಿಹಾಕಿದರೆ ಸರಕಾರವು ಹಣಕಾಸು ಮಸೂದೆಗಳಾಗಿ ಅಂಗೀಕಾರಗೊಂಡಿರುವ ಎಲ್ಲ 19 ಮಸೂದೆಗಳಿಗಾಗಿ ಪ್ರತ್ಯೇಕ ಶಾಸನವೊಂದನ್ನು ತರಬೇಕಾಗುತ್ತದೆ. ಅಂದರೆ ಹಣಕಾಸು ಮಸೂದೆಯಾಗಿ ಅಂಗೀಕಾರಗೊಂಡಿರುವ ಆಧಾರ್ ಕಾಯ್ದೆಯೂ ಪುನರ್‌ಪರಿಶೀಲನೆಗೆ ಒಳಪಡುತ್ತದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ತಿದ್ದುಪಡಿಗೊಂಡ ಹಣಕಾಸು ಕಾಯ್ದೆ 2017ರಲ್ಲಿ ನ್ಯಾಯಾಧಿಕರಣಗಳ ಕುರಿತ ನಿಯಮಗಳನ್ನೂ ರದ್ದುಗೊಳಿಸಿತ್ತು ಮತ್ತು ನ್ಯಾಯಾಧಿಕರಣಗಳ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಹೊಸದಾಗಿ ನಿಯಮಗಳನ್ನು ರೂಪಿಸುವಂತೆ ಸರಕಾರಕ್ಕೆ ನಿರ್ದೇಶ ನೀಡಿತ್ತು.

ಹಣಕಾಸು ಮಸೂದೆಗಳು ತೆರಿಗೆಗಳ ಹೇರಿಕೆ ಮತ್ತು ಸಂಚಿತ ನಿಧಿಯಿಂದ ಧನ ವಿನಿಯೋಗಕ್ಕೆ ಅವಕಾಶಗಳನ್ನು ಒದಗಿಸುತ್ತವೆ. ಅವುಗಳನ್ನು ಲೋಕಸಭೆಯಲ್ಲಿ ಮಂಡಿಸಬೇಕಾಗುತ್ತದೆ ಮತ್ತು ಅವು ಅಂಗೀಕಾರಗೊಂಡರೆ ರಾಜ್ಯಸಭೆಯು ತಿದ್ದುಪಡಿಗಳನ್ನು ಮಾತ್ರ ಸೂಚಿಸಬಹುದು. ಆದರೆ ಅದು ಮಸೂದೆಯನ್ನು ತಡೆಹಿಡಿಯುವಂತಿಲ್ಲ ಅಥವಾ ತಿರಸ್ಕರಿಸುವಂತಿಲ್ಲ. ಅದು ಸೂಚಿಸಿರುವ ತಿದ್ದುಪಡಿಗಳನ್ನು ಲೋಕಸಭೆಯು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು.

ಲೋಕಸಭೆಯಲ್ಲಿ ಬಹುಮತವಿದ್ದು ರಾಜ್ಯಸಭೆಯಲ್ಲಿ ಸದಸ್ಯ ಬಲದ ಕೊರತೆಯಿರುವ ಸರಕಾರಕ್ಕೆ ಇದು ಪ್ರತಿಪಕ್ಷದಿಂದ ವಿರೋಧವನ್ನು ಎದುರಿಸಬಹುದಾದ ಮಸೂದೆಯ ಅಂಗೀಕಾರವನ್ನು ಸುಲಭಗೊಳಿಸುತ್ತದೆ.

ಹಲವಾರು ಮಸೂದೆಗಳನು ್ನ ಹಣಕಾಸು ಮಸೂದೆಗಳೆಂದು ಗುರುತಿಸಿದ್ದು ಹಿಂದೆ ಭಾರೀ ಚರ್ಚೆಗಳಿಗೆ ಕಾರಣವಾಗಿತ್ತು. ಆಧಾರ್ ಪ್ರಕರಣದಲ್ಲಿ ವಿವಾದವು ಸರ್ವೋಚ್ಚ ನ್ಯಾಯಾಲಯವನ್ನು ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News