'ಮಕ್ಕಳಲ್ಲಿ ಅಂಬೇಡ್ಕರ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದು ಖಂಡನೀಯ'

Update: 2019-11-14 13:53 GMT

ವಿಟ್ಲ, ನ. 14: ಬಿಜೆಪಿ ಸರಕಾರವು ಶಿಕ್ಷಣ ಇಲಾಖೆಯ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ಒಬ್ಬರೇ ಬರೆದಿಲ್ಲ ಎಂದು ಶಾಲಾ ಪಠ್ಯ ಪುಸ್ತಕದಲ್ಲಿ ದಾಖಲಿಸಿ ಶಾಲೆಗಳಿಗೆ ಹಂಚುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಖಂಡಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಅವರು ಗುರುವಾರ ವಿಟ್ಲದ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ದಲಿತ ಸಂಘಟನೆಗಳು ಮತ್ತು ಸಂವಿಧಾನದಲ್ಲಿ ನಂಬಿಕೆ ಇರುವವರು ಕೂಡಲೇ ಪಠ್ಯ ಪುಸ್ತಕವನ್ನು ಬದಲಾಯಿಸುವಂತೆ ಸರಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿದ್ದು, ಸರ್ಕಾರದ ಈ ನಡೆಯನ್ನು ದಲಿತ್ ಸೇವಾ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಶಾಲಾ ಮಕ್ಕಳಲ್ಲಿ ಅಂಬೇಡ್ಕರ್ ಅವರ ಮೇಲೆ ಇರುವ ಅಭಿಮಾನವನ್ನು ತಪ್ಪು ಮಾಹಿತಿಯ ಮೂಲಕ ದಾರಿ ತಪ್ಪಿಸುತ್ತಿರುವುದು ಖಂಡನೀಯ. ಈ ಬಗ್ಗೆ ಬಿಜೆಪಿ ಪಕ್ಷದಲ್ಲಿ ಗೆದ್ದಿರುವ ಪರಿಶಿಷ್ಟ ಜಾತಿ ಪಂಗಡದ ಗ್ರಾಮ ಪಂಚಾಯತ್ ಸದಸ್ಯರು, ಶಾಸಕರು ಸಂಸದರು, ಸಚಿವರು ಅಂಬೇಡ್ಕರ್ ಅವರ ಮೇಲೆ ನಂಬಿಕೆ ಇದ್ದಲ್ಲಿ ಕೂಡಲೇ ರಾಜೀನಾಮೆ ಕೊಟ್ಟು ಹೊರಬರಬೇಕು.

ಇಲ್ಲವಾದಲ್ಲಿ ಇವರು ಅಂಬೇಡ್ಕರ್ ವಿರೋಧಿಗಳು, ಇವರಿಗೆ ಅಂಬೇಡ್ಕರ್ ಅವರ ಹೆಸರನ್ನೂ ಕೂಡಾ ಹೇಳುವ ಯೋಗ್ಯತೆ ಇಲ್ಲ. ಯಾವುದೇ ಪಕ್ಷದವರು ಈ ರೀತಿ ಅವಮಾನ ಮಾಡಿದರೂ ದಲಿತ್ ಸೇವಾ ಸಮಿತಿ ಹೋರಾಟ ಮಾಡಲು ಸಿದ್ಧ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ನಾಗೇಶ್, ಚಂದ್ರಶೇಖರ ಯು, ಸೋಮಪ್ಪ ನಾಯ್ಕ ಮಲ್ಯ, ಗಣೇಶ್ ಸೀಗೆಬಲ್ಲೆ, ಸೋಮಪ್ಪ ಸುರುಳಿ ಮೂಲೆ, ರಮೇಶ್ ಅಜ್ಜಿನಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News