ಬಂಟ್ವಾಳ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

Update: 2019-11-14 14:09 GMT

ವಿಟ್ಲ, ನ. 14: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಹಾಗೂ ಶಾಖಾ ಗ್ರಂಥಾಲಯ ಬಂಟ್ವಾಳ ಇದರ ಆಶ್ರಯದಲ್ಲಿ ನ. 14ರಿಂದ ನ.20ರವರೆಗೆ ನಡೆಯಲಿರುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2019ಕ್ಕೆ ಬಂಟ್ವಾಳ ಶಾಖಾ ಗ್ರಂಥಾಲಯದಲ್ಲಿ ಗುರುವಾರ ಚಾಲನೆ ನೀಡಲಾಯಿತು.  

ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕಿ ಡಾ. ನಾಗವೇಣಿ ಮಂಚಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸಾಮಾನ್ಯ ಓದುಗನಿಗೆ ಹತ್ತಿರವಾಗುವ ಪುಸ್ತಕಗಳು ಬಂದಾಗ ಓದುಗರ ಸಂಖ್ಯೆ ಹೆಚ್ಚಾಗುತ್ತದೆ. ಓದು ಮನಸ್ಸನ್ನು ಹೆಚ್ಚು ನಿರ್ಮಲವಾಗಿಸುತ್ತದೆ. ಆತ್ಮವಿಶ್ವಾಸ, ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಮುಂದಿನ ಪೀಳಿಗೆ ಮಾದರಿಯಾಗ ಬೇಕಾದರೆ ನಾವು ಒಳ್ಳೆಯವರಾಗಬೇಕು. ನಮ್ಮ ಮನೆಯಲ್ಲಿ ಒಳ್ಳೆಯ ಪುಸ್ತಕ ಇರಬೇಕು. ಪುಸ್ತಕ, ಗ್ರಂಥಾಲಯ ಆತ್ಮಸುಖವನ್ನು ನೀಡುತ್ತದೆ. ಗ್ರಂಥಾಲಯ ಒಳ್ಳೆಯ ಮನಸ್ಸುಗಳನ್ನು, ಸ್ವಸ್ಥ ಸಮಾಜವನ್ನು ಸಷ್ಟಿಸುತ್ತದೆ ಎಂದು ಅವರು ತಿಳಿಸಿದರು. 

ನಿವೃತ್ತ ಮುಖ್ಯ ಶಿಕ್ಷಕ ಸಂಕಪ್ಪ ಶೆಟ್ಟಿ ಮಾತನಾಡಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಪುಸ್ತಕ ಓದುವಿಕೆ ಸಹಕಾರಿಯಾಗಲಿದೆ ಎಂದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಮಮತಾ ರೈ, ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟ್ವಾಳ ಶಾಖಾ ಗ್ರಂಥ ಪಾಲಕಿ ಪ್ರನಿತಾ ಮೊಂತೇರೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಯಶವಂತಿ ವಂದಿಸಿದರು. ಸುಜಾತಾ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News