ಕೇಂದ್ರ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

Update: 2019-11-14 14:32 GMT

ಉಡುಪಿ, ನ.14: ಕೇಂದ್ರ ಸರಕಾರದ ಜನವಿರೋಧಿ ಆರ್ಥಿಕ ನೀತಿ, ನಿರುದ್ಯೋಗ ಸಮಸ್ಯೆ, ಉದ್ದಿಮೆಗಳ ಮುಚ್ಚುಗಡೆ, ಕೃಷಿ ಬಿಕ್ಕಟ್ಟು, ಬ್ಯಾಂಕ್ ವಂಚನೆ, ಕಪ್ಪುಹಣ ತರುವಲ್ಲಿ ವಿಫಲ ಹಾಗೂ ಸರಕಾರದ ಸ್ವಾಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗಿಗಳಿಗೆ ಒಪ್ಪಿಸುವ ನೀತಿಗಳ ವಿರುದ್ಧ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆದೇಶದಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಗುರುವಾರ ಅಜ್ಜರಕಾಡಿನ ಹುತಾತ್ಮ ಚೌಕದ ಎದುರು ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನರೇಂದ್ರ ಮೋದಿ ಸರಕಾರದಲ್ಲಿ ಸ್ವತಹ ಮೋದಿಯವರನ್ನು ಹೊರತು ಪಡಿಸಿ ಉಳಿದವರಾರೂ ಖುಷಿಯಲ್ಲಿಲ್ಲ. ನಮೋ ಎಂದರೆ ನರೇಂದ್ರ ಮೋದಿ ಅಲ್ಲ ಬದಲಾಗಿ ನಮಗೆ ಮೋಸ ಎಂಬುದು ದೇಶದ ಜನತೆಗೆ ಈಗ ಅರ್ಥವಾಗಿದೆ ಎಂದರು.

ಕಳೆದ ಆರು ತಿಂಗಳಿನಿಂದ ಬಸವ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಬಡ ಮಹಿಳೆಯರಿಗೆ ಹಾಲಿನ ಸಬ್ಸಿಡಿಯೂ ಆರು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ದೇಶದ ಜಿಡಿಪಿಯಲ್ಲಿ ಶೇ.1ರಷ್ಟು ಕಡಿಮೆಯಾಗುವುದೆಂದರೆ ಸುಮಾರು ಐದು ಲಕ್ಷ ಕೋಟಿ ರೂ. ಆದಾಯ ಕಡಿಮೆಯಾದಂತೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಶೇ.8ರಷ್ಟಿದ್ದ ಜಿಡಿಪಿ ಇಂದು ಶೇ.5ಕ್ಕೂ ಕೆಳಕ್ಕಿಳಿದಿದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅಂದಾಜಿಸಬಹುದು ಎಂದವರು ವಿವರಿಸಿದರು.

ಅಭಿವೃದ್ಧಿಯ ಬದಲು ಹಿಂದುತ್ವ ಇಂದು ಮೋದಿ ಮಂತ್ರವಾಗಿದೆ. ಇದರಿಂದ ಯುವಕರು ಬೀದಿಗಿಳಿದಿದ್ದರೆ, ದೇಶದ ಬಹುಪಾಲು ಜನರು ಬೀದಿ ಪಾಲಾಗಿದ್ದಾರೆ. ಶ್ರೀಮಂತರು ಕೆಲವರನ್ನು ಹೊರತುಪಡಿಸಿದರೆ ಉಳಿದವರು ಮೋದಿಯವರ ತಪ್ಪು ಆರ್ಥಿಕ ನೀತಿಯ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಕಾರ್ಯಕ್ರಮದ ಉಸ್ತುವಾರಿ ಮತ್ತು ಎಐಸಿಸಿ ಸದಸ್ಯ ಪಿ.ವಿ. ಮೋಹನ್ ಮಾತನಾಡಿ, ಒಂದು ದೇಶದ ಆರ್ಥಿಕ ಪ್ರಗತಿಯ ಸೂಚಕವಾದ ಹಾಗೂ ಮಾನದಂಡವಾಗಿ ಜಿಡಿಪಿ ಮೋದಿ ಆಳ್ವಿಕೆಯ ಕಳೆದ ಆರು ವರ್ಷಗಳಲ್ಲಿ ಶೇ.3ಕ್ಕೂ ಅಧಿಕ ಕೆಳಗೆ ಕುಸಿದಿದೆ ಎಂದರೆ ದೇಶದ ಪ್ರಗತಿ ಕುಂಠಿತವಾಗಿದೆ ಎಂದೇ ಅರ್ಥ. ಅದು ಜನರ ನಿತ್ಯ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ರೀತಿಯಲ್ಲಿ ಆಡಳಿತ ವನ್ನು ನಡೆಸುತ್ತಿದೆ. ಕಳೆದ ಆರು ವರ್ಷಗಳಿಂದ ಮೋದಿ ಸರಕಾರ ದೇಶದ ಜನತೆಗೆ ನೀಡಿದ ಒಂದೇ ಒಂದು ಆಶ್ವಾಸನೆಯನ್ನು ಈಡೇರಿಸಿಲ್ಲ. ಬ್ಯಾಂಕಿಂಗ್ ವ್ಯವಸ್ಥೆ ಶಿಥಿಲವಾದರೆ, ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಕೇವಲ ಭಾವನಾತ್ಮಕ ವಿಷಯದ ಮೇಲೆ ಅದು ದೇಶದ ಜನತೆಯನ್ನು ಯಾಮಾರಿಸುತ್ತಿದೆ ಎಂದರು.

ಮಾಜಿ ಶಾಸಕ ಯು.ಆರ್.ಸಭಾಪತಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಅವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ಸಭೆಯ ಬಳಿಕ ಕಾಂಗ್ರೆಸ್ ನಾಯಕರ ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಅರ್ಪಿಸಿ, ಕೂಡಲೇ ಮಧ್ಯಪ್ರವೇಶಿಸಿ, ಕೇಂದ್ರ ಸರಕಾರ ಜನವಿರೋಧಿ ನೀತಿಯನ್ನು ಕೈಬಿಟ್ಟು ಜನಪರವಾದ ಆಡಳಿತ ನೀಡುವಂತೆ ಸಲಹೆ-ಸೂಚನೆ ನೀಡುವಂತೆ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಎಂ.ಎ.ಗಫೂರ್, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ ಮುದ್ರಾಡಿ, ಗೀತಾ ವಾಗ್ಳೆ, ಸರಸು ಡಿ ಬಂಗೇರ, ವೆರೋನಿಕಾ ಕರ್ನೇಲಿಯೊ, ಬಿ.ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಎ.ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಹಿರಿಯಣ್ಣ, ಶಬ್ಬಿರ್ ಅಹಮ್ಮದ್, ಹಬೀಬ್ ಅಲಿ, ಡಾ.ಸುನಿತಾ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಸತೀಶ್ ಅಮೀನ್ ಪಡುಕೆರೆ, ಅಮೃತಾ ಕೃಷ್ಣಮೂರ್ತಿ, ಕೀರ್ತಿ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಶೇಖರ ಮಡಿವಾಳ, ಚಂದ್ರಿಕಾ ಶೆಟ್ಟಿ, ರಮೇಶ್ ಕಾಂಚನ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News