ಮಂಗಳೂರು ಉತ್ತರ: ಮುಂದುವರಿದ ಕಾಂಗ್ರೆಸ್ ಹೀನಾಯ ಸೋಲಿನ ಓಟ

Update: 2019-11-14 15:21 GMT
ಮೊಯ್ದಿನ್ ಬಾವಾ - ಜೆ.ಆರ್. ಲೋಬೊ

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಂಗ್ರೆಸ್‌ನ ಮಾಜಿ ಶಾಸಕರಾದ ಜೆ.ಆರ್.ಲೋಬೊ ಹಾಗೂ ಮೊಯ್ದಿನ್ ಬಾವಾರಿಗೆ ಪಾಲಿಕೆ ಚುನಾವಣೆಯಲ್ಲಿ ತೀವ್ರ ನಿರಾಸೆ ಪುನರಾವರ್ತನೆಯಾಗಿದೆ.

ಲೋಬೊ ಅವರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕೆಲವು ಸ್ಥಾನಗಳನ್ನಾದರೂ ಗಳಿಸಿ ಅಲ್ಪಸ್ವಲ್ಪ ಸಮಾಧಾನ ತಂದಿದ್ದರೆ ಮೊಯ್ದಿನ್ ಬಾವಾ ಅವರ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಹೀನಾಯವಾಗಿ ಸೋತು ಅವರಿಗೆ ಭಾರೀ ಮುಖಭಂಗವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ವಿಶ್ವಾಸದಿಂದ ಪುನರಾಯ್ಕೆ ಬಯಸಿದ್ದ ಮೊಯ್ದಿನ್ ಬಾವಾ ಹಾಗು ಜೆ.ಆರ್ ಲೋಬೊ ಅವರು ದೊಡ್ಡ ಅಂತರದಿಂದ ಸೋತಿದ್ದರು. ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲೂ ಈ ಇಬ್ಬರು ಮಾಜಿ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಮತ್ತೆ ಭಾರೀ  ಹಿನ್ನಡೆಯಾಗಿತ್ತು. ಹಾಗಾಗಿ ಮಹಾನಗರ ಪಾಲಿಕೆ ಚುನಾವಣೆ ಈ ಇಬ್ಬರೂ ಮಾಜಿ ಶಾಸಕರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಇಬ್ಬರೂ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನೇ ಹೈಕಮಾಂಡ್ ಪರಿಗಣಿಸುವಂತೆ ಮಾಡಿದ್ದಲ್ಲದೆ, ಅಭ್ಯರ್ಥಿಗಳ ಜತೆ ಬಿರುಸಿನ ಪ್ರಚಾರಕ್ಕೂ ಇಳಿದಿದ್ದರು. ಕೆಲವು ವಾರ್ಡ್ ಗಳಲ್ಲಿ ಈ ಮಾಜಿ ಶಾಸಕರ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ವಿವಾದ ಕೂಡ ಉಂಟಾಗಿ ಬಂಡಾಯ ಅಭ್ಯರ್ಥಿಗಳೂ ಕಣಕ್ಕಿಳಿದಿದ್ದರು.

ಮೊಯ್ದಿನ್ ಬಾವಾಗೆ ಭಾರೀ ಮುಖಭಂಗ

ಆದರೆ ಗುರುವಾರದ ಫಲಿತಾಂಶ ಈ ಇಬ್ಬರೂ ಕಾಂಗ್ರೆಸ್‌ನ ಮಾಜಿ ಶಾಸಕರ ಸೋಲಿನ ಗಾಯದ ಮೇಲೆ ಬರೆ ಎಳೆದಿದೆ. ಮಾಜಿ ಶಾಸಕ ಮೊಯ್ದಿನ್ ಬಾವಾರ ವಿಧಾನಸಭಾ ಕ್ಷೇತ್ರಕ್ಕೊಳಪಡುವ 22 ವಾರ್ಡ್‌ಗಳಲ್ಲಿ ಕೇವಲ ಪಂಜಿಮೊಗರು ವಾರ್ಡ್‌ನಲ್ಲಿ ಮಾತ್ರ ಕಾಂಗ್ರೆಸ್‌ನ ಅನಿಲ್ ಕುಮಾರ್ ಜಯಗಳಿಸಿದ್ದಾರೆ. ಪದವು (ಪೂರ್ವ) ವಾರ್ಡ್‌ನಲ್ಲಿ ಮಾಜಿ ಮೇಯರ್ ಭಾಸ್ಕರ್ ಕೆ.ಜಯಗಳಿಸಿದ್ದಾರೆ. ಆದರೆ ಈ ವಾರ್ಡ್ ನ ಮೂರು ಬೂತ್‌ಗಳು ಮಂಗಳೂರು ಉತ್ತರ ಕಡೆಗೆ ಹಾಗೂ ಮೂರು ಬೂತ್‌ಗಳು ಮಂಗಳೂರು ದಕ್ಷಿಣ ವ್ಯಾಪ್ತಿಗೆ ಒಳಪಡುತ್ತವೆ.

ಜೆ.ಆರ್.ಲೋಬೊ ಅವರು ಪ್ರತಿನಿಧಿಸಿದ್ದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 38 ವಾರ್ಡ್‌ಗಳಲ್ಲಿ 12 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಮೂಲಕ ಸೋಲಿನಲ್ಲೂ ಲೋಬೊ ಒಂದಿಷ್ಟು ಸಮಾಧಾನ ಕಂಡುಕೊಂಡಿದ್ದಾರೆ. ಆದರೆ ಮೊಯ್ದಿನ್ ಬಾವಾ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಓಟ ಸತತ ಮೂರು ಚುನಾವಣೆಗಳಲ್ಲಿ ಮುಂದುವರೆದಿದೆ.

ಮಂಗಳೂರು ದಕ್ಷಿಣ ವ್ಯಾಪ್ತಿಯ ಕೆಲವು ವಾರ್ಡ್ ಗಳಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಟಿಕೆಟ್ ಹಂಚಿಕೆಯಲ್ಲಿ ಪ್ರಭಾವ ಬೀರಿದ್ದರು. ಆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋತಿದೆ.

ಜೊತೆಗೆ ಈ ಕ್ಷೇತ್ರಗಳ ಹಾಲಿ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News