ಸಂವಿಧಾನದ ಮೇಲೆ ಗೌರವವಿಲ್ಲದವರು ದೇಶಬಿಟ್ಟು ತೊಲಗಿ: ಜಯನ್ ಮಲ್ಪೆ ಆಕ್ರೋಶ

Update: 2019-11-14 15:50 GMT

ಉಡುಪಿ, ನ.14: ಸಮಾನತೆ, ಸಹೋದರತೆ ಮತ್ತು ಬಾಂಧ್ಯತ್ವವನ್ನು ಸಾರುವ ಅಂಬೇಡ್ಕರ್ ಬರೆದ ಭಾರತದ ಸಂವಿಧಾನದ ಮೇಲೆ ಗೌರವವಿಲ್ಲದವರು ಈ ದೇಶಬಿಟ್ಟು ತೊಲಗಲಿ ಎಂದು ಉಡುಪಿಯ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಗುರುವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯ ವಿರುದ್ಧ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ, ರಾಜ್ಯ ಬಿಜೆಪಿ ಸರಕಾರದ ವಜಾಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನಾ ಸಭೆಯನ್ನು್ದೇಶಿಸಿ ಅವರು ಮಾತನಾಡುತಿದ್ದರು.

ಚಹಾ ಮಾರುವ ಹುಡುಗ ಪ್ರಧಾನಿಯಾಗಲು, ಮನೆ ಮನೆಗೆ ಪೇಪರ್ ಹಾಕುವ ಹುಡುಗ ರಾಷ್ಟ್ರಪತಿಯಾಗಲು ಇದೇ ಅಂಬೇಡ್ಕರ್ ಬರೆದ ಸಂವಿಧಾನ ದಿಂದ ಮಾತ್ರ ಸಾಧ್ಯವಾಗಿದೆ ಎಂದ ಜಯನ್ ಮಲ್ಪೆ, ಸಂವಿಧಾನಕ್ಕೆ ಅಪಚಾರ ಎಸಗಿದರೆ ಈ ದೇಶ ಜಾತಿ ಹೆಸರಲ್ಲಿ ತುಂಡುತುಂಡಾಗಿ ಹೋಗುತ್ತದೆ ಎಂದರು.

ಸಮಾಜಸೇವಕ ಹಾಗೂ ಉದ್ಯಮಿ ಅಮೃತ್ ಶೆಣೈ ಮಾತನಾಡಿ, ಮಾನವ ಹಕ್ಕುಗಳ ಪ್ರತಿಪಾದಕ ಮತ್ತು ಸಾಮಾಜಿಕ ನ್ಯಾಯದ ಹರಿಕಾರನ ಹೆಸರು ನಾಶಮಾಡುವ ತಂತ್ರ ಬಿಜೆಪಿಯ ಅಜೆಂಡ. ಇತಿಹಾಸದ ಪುಟಗಳಿಂದ ಅಂಬೇಡ್ಕರ್ ಹೆಸರು ಇಲ್ಲದಂತೆ ಮಾಡುವ ಹಿಂದೆ ಆರ್‌ಎಸ್‌ಎಸ್ ಕುತಂತ್ರವಿದೆ. ಸೂರ್ಯ ಚಂದ್ರರು ಈ ಭೂಮಿ ಮೇಲೆ ಇರುವವರೆಗೆ ಭಾರತದ ಸಂವಿಧಾನ ವನ್ನು ಅಂಬೇಡ್ಕರ್‌ರೇ ಬರೆದದ್ದು ಎಂದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ ಮುಸ್ಲಿಮರ ವಿರುದ್ಧ ದಲಿತರನ್ನು ಎತ್ತಿಕಟ್ಟಿ, ಯಶಸ್ವಿಯಾಗುವ ಹುನ್ನಾರವನ್ನು ರೂಪಿಸಿದ ಮನುವಾದಿಗಳು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ ತಮ್ಮ ಅಜೆಂಡವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿ ದಲಿತ, ಮುಸ್ಲಿಮ್, ಕ್ರಿಶ್ಚನ್‌ರನ್ನು ಈ ವ್ಯವಸ್ಥೆಯಲ್ಲಿ ನಾಶಮಾಡುವ ತಂತ್ರ ರೂಪಿಸಿದ್ದಾರೆ ಎಂದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ದಸಂಸ ನಾಯಕ ವಾಸುದೇವ ಮುದ್ದೂರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಸುಂದರ ಕಪ್ಪೆಟ್ಟು, ಯವಸೇನೆ ಅದ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ, ಅನಿಲ್ ಅಂಬಲಪಾಡಿ, ಸಂತೋಷ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಭಗವಾನ್ ಮಲ್ಪೆ, ಗುಣವಂತ ತೊಟ್ಟಂ,ಯುವರಾಜ್ ಪುತ್ತೂರು, ದಿನೇಶ್ ಮೂಡುಬೆಟ್ಟು, ಸಂಪತ್ ಗುಜ್ಜರಬೆಟ್ಟು, ರಮೇಶ್‌ಪಾಲ್, ರಾಜು ಬೆಟ್ಟಿನಮನೆ, ಸುಕೇಶ್ ಪುತ್ತೂರು, ರಮೋಜಿ ಮಲ್ಪೆ, ಪ್ರಸಾದ್ ನೆರ್ಗಿ, ಅಶೋಕ್ ನಿಟ್ಟೂರು ಹಾಗೂ ಮೋಹನ್‌ದಾಸ್ ಚಿಟ್ಪಾಡಿ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News