ಕೃಷ್ಣ ಮಠದಲ್ಲಿ ಚಿಣ್ಣರ ಮಾಸೋತ್ಸವ ಉದ್ಘಾಟನೆ

Update: 2019-11-14 15:52 GMT

ಉಡುಪಿ, ನ.14: ಚಿಣ್ಣರ ಮಾಸೋತ್ಸವ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದು, ಮಕ್ಕಳೊಳಗೆ ಕೃಷ್ಣನೇ ನಿಂತು ಕುಣಿಯುತ್ತಿದ್ದಾನೆ ಎಂಬುದಾಗಿ ಭಾವಿಸಬೇಕು ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕೃಷ್ಣ ಮಠದ ಮಧ್ವಮಂಟಪದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಒಂದು ತಿಂಗಳ ಕಾಲ ನಡೆಯುವ ಚಿಣ್ಣರ ಮಾಸೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಚಿಣ್ಣರ ಸಂತರ್ಪಣೆ ಯೋಜನೆಯ ಶಾಲೆಗಳ ಶಿಕ್ಷಕ-ಶಿಕ್ಷಕಿಯರೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳಿಗೆ ತಾಯಿ ಸ್ಥಾನ ತುಂಬುತ್ತಿದ್ದಾರೆ. ದೇಹ ಮತ್ತು ಮನಸ್ಸಿಗೆ ಬೇಕಾದ ಆಹಾರ ಊಟ ಮತ್ತು ಶಿಕ್ಷಣವನ್ನು ಒಟ್ಟಿಗೆ ನೀಡುತ್ತಿದ್ದಾರೆ. ದೇಶದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ಭಾರತದಲ್ಲಿ ಇಂದಿನ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ದೇವರ ಅನುಗ್ರಹದಿಂದ ಯೋಜನೆಯ ಎಲ್ಲಾ ಮಕ್ಕಳಿಗೆ ಯೋಗ್ಯ ಸ್ಥಾನ ಲಭಿಸಲಿ ಎಂದು ಹಾರೈಸಿದರು.

ಅತಿಥಿಗಳಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮುಗ್ಧ ಮಕ್ಕಳಲ್ಲಿ ದೇವರು ಇರುತ್ತಾನೆ. ಪಲಿಮಾರು ಶ್ರೀಗಳು 16 ವರ್ಷದ ಹಿಂದೆ ಆರಂಭಿಸಿದ ಚಿಣ್ಣರ ಸಂತರ್ಪಣೆ ಯೋಜನೆ ಮಾದರಿಯಾಗಿದೆ. ಇದನ್ನು ಗಮನಿಸಿ ಕೇಂದ್ರ ಸರ್ಕಾರ ದೇಶದಲ್ಲಿ 10 ಕೋಟಿ ಮಕ್ಕಳಿಗೆ ಅಕ್ಷರ ದಾಸೋಹ ಪ್ರಾರಂಭಿಸಿದೆ ಎಂದರು.

ಚಿಣ್ಣರ ಸಂತರ್ಪಣೆ ಯೋಜನೆಯ ಅಧ್ಯಕ್ಷ ಅರುಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಚಿಣ್ಣರ ಸಂತರ್ಪಣೆ ಯೋಜನೆಯ ಕಾರ್ಯದರ್ಶಿ ಶ್ರೀನಿವಾಸ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News