ಪ್ರಜಾಪ್ರಭುತ್ವ ಬಗ್ಗೆ ಯುವಕರ ನಿರ್ಲಕ್ಷ: ರಾಜಾರಾಮ್ ತೋಳ್ಪಾಡಿ

Update: 2019-11-14 16:26 GMT

ಮಂಗಳೂರು, ನ.14: ಪ್ರಸಕ್ತ ದಿನಮಾನಗಳಲ್ಲಿ ಯುವಕರು ಚುನಾವಣೆ, ಕಣ್ಣಿಗೆ ಕಾಣುವ ಸಂಸ್ಥೆಗಳು-ವಿಷಯಗಳ ಬಗ್ಗೆ ಮಾತ್ರ ಸ್ಪಂದಿಸುತ್ತಾರೆ. ಆದರೆ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತೂ ಮಾತನಾಡುವುದಿಲ್ಲ. ಈ ನಿರ್ಲಕ್ಷ ಭವಿಷ್ಯದಲ್ಲಿ ದೊಡ್ಡ ಆಘಾತ ನೀಡಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕ ರಾಜಾರಾಮ್ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಲ್ಮಠದ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಭಾರತ ಸೇವಾದಳ, ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರನ್ನು ನೆನಪಿಸಿಕೊಂಡು, ಅವರ ಕೊಡುಗೆಗಳನ್ನು ಸ್ಮರಿಸಬೇಕು. ಭಾಷಣ, ಭಜನೆ ಮಾಡಿದರೆ ಸಾಲದು ಪ್ರಮುಖ ನಾಯಕರನ್ನು ವಿಮರ್ಶೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಹಿರಿಯರ ವಿಚಾರಗಳು, ಸಿದ್ಧಾಂತಗಳು ಪ್ರಸಕ್ತ ಕಾಲದಲ್ಲಿ ದೇಶಕ್ಕೆ ಎಷ್ಟು ಸಹಕಾರಿ ಎನ್ನುವ ಆಯಾಮದಲ್ಲಿ ವಿಮರ್ಶಿಸಬೇಕು ಎಂದರು.

ದೈವಾರಾಧನೆ ಹೆಸರಲ್ಲಿ ಕರಾವಳಿಯಲ್ಲಿ ಹಿರಿಯರನ್ನು ನೆನಪಿಸಿಕೊಳ್ಳುವ ಇತಿಹಾಸವಿದೆ. ಸ್ಮರಣೆ ಜತೆ ವಿಮರ್ಶೆ ಮಾಡುವು ದನ್ನೂ ಮೈಗೂಡಿಸಿಕೊಳ್ಳಬೇಕು. ವಿಮರ್ಶೆ ಎಂದರೆ ಅಗೌರವದಿಂದ ಕಾಣುವುದಲ್ಲ; ಬದಲಾಗಿ ಗೌರವಯುತವಾಗಿರಬೇಕು. ಹಿರಿಯರ ತ್ಯಾಗ, ಕೊಡುಗೆಗಳನ್ನು ಮರೆಯಬಾರದು. ವಿಮರ್ಶೆ ಸದ್ಭಾವನೆಯಿಂದ ಕೂಡಿರಬೇಕು ಎಂದು ಹೇಳಿದರು.

1950-60ರ ಜವಾಹರಲಾಲ್ ನೆಹರೂ ಅವರ ದೇಶದ ಕಲ್ಪನೆ ಹಾಗೂ 21ನೇ ಶತಮಾನದ ಪ್ರಧಾನಿ ನರೇಂದ್ರ ಮೋದಿಯ ದೇಶದ ಕಲ್ಪನೆಗಳಿಗೆ ತುಂಬ ವ್ಯತ್ಯಾಸವಿದೆ. ನೆಹರೂ ಚಿಂತನೆ, ಆದರ್ಶಗಳನ್ನು ವಿಮರ್ಶಿಸುವ ಜತೆಗೆ ಮೋದಿಯ ಪ್ರಸಕ್ತ ಭಾರತದ ರಾಷ್ಟ್ರವಾದದ ಬಗ್ಗೆಯೂ ವಿಮರ್ಶಿಸುವ ಅಗತ್ಯವಿದೆ ಎಂದು ವಿವರಿಸಿದರು.

ಭಾರತ ಸೇವಾದಳ ತಾಲೂಕು ಸೇವಾ ಸಮಿತಿಯ ಅಧ್ಯಕ್ಷ ಬಿ.ಪ್ರಭಾಕರ್ ಶ್ರೀಯಾನ್ ಮಾತನಾಡಿ, ಜವಾಹರಲಾಲ್ ನೆಹರೂ 1962ರ ಫೆಬ್ರುವರಿಯಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದರು. ಆ ಸಂದರ್ಭ ನೆಹರೂ ಅವರ ಅಂಗರಕ್ಷಣಾ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿತ್ತು. ಅಂದಿನ ಬಿಜೈ ಲಕ್ಷ್ಮೀಬಾಯಿ ಮೆಮೋರಿಯಲ್ ಮ್ಯೂಸಿಯಂನಲ್ಲಿ ನೆಹರೂ ರಾತ್ರಿ ವಾಸ್ತವ್ಯ ಹೂಡಿದ್ದರು. ಮರುದಿನ ನಗರದ ರೈಲುನಿಲ್ದಾಣ ಸಮೀಪದ ಪ್ರದೇಶದಲ್ಲಿನ ಮಕ್ಕಳ ಜತೆಗೆ ಆಟ ಆಡಿದ್ದರು. ಮಂಗಳೂರು ಭೇಟಿ ಸಾರ್ಥಕವಾಯಿತೆಂದು ನೆಹರೂ ಹೃದಯಾಳದಿಂದ ಹೇಳಿದ್ದರು ಎಂದು ನೆಹರೂ ಅವರನ್ನು ಪ್ರಭಾಕರ್ ಶ್ರೀಯಾನ್ ಸ್ಮರಿಸಿದರು.

ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್‌ಪೇಟೆ ಮಾತನಾಡಿ, ನೆಹರೂ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡ ನಾಯಕರಲ್ಲಿ ಅದ್ವಿತೀಯರು. ರಾಷ್ಟ್ರೀಯ ನಾಯಕರೆನಿಸಿಕೊಂಡವರು ಸಾಮಾನ್ಯ ವ್ಯಕ್ತಿತ್ವ ಹೊಂದಿದಾಗ ಮಾತ್ರ ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ. ನೆಹರೂ ಅವರ ವಿಶಾಲ ಚಿಂತನೆ, ಆದರ್ಶಗಳು ಯುವಕರಿಗೆ ಮಾರ್ಗದರ್ಶಿ. ನೆಹರೂ ಯುವಕೇಂದ್ರವು ನೆಹರೂ ಚಿಂತನೆಗಳನ್ನು ಜಿಲ್ಲೆಯ ಮೂಲೆಮೂಲೆಗೂ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಮಠ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾರಿಯೆಟ್ಸ್ ಜೆ. ಮಸ್ಕರೆನಸ್ ವಹಿಸಿದ್ದರು.

ನೆಹರೂ ಬಗ್ಗೆ ವಿದ್ಯಾರ್ಥಿನಿ ರಾಜಶ್ರೀ ಮಾತನಾಡಿದರು. ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜಯಶಾಲಿಗಳಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ಜಿಲ್ಲಾ ಸಂಘಟಕ ಟಿ.ಎಸ್. ಮಂಜೇಗೌಡ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಪ್ರೇಮಚಂದ್ರ, ಹಿರಿಯ ಉಪನ್ಯಾಸಕ ಜೆಪಿಎಂ ಚೆರಿಯನ್, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಬಾಲಕೃಷ್ಣ ಡಿ. ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News