ಡಾ. ಅನಂತ್ ಪ್ರಭು ರಿಂದ ಸಂತ ಆಗ್ನೆಸ್ ಶಾಲೆಯಲ್ಲಿ 'ವಾಟರ್ ಬೆಲ್'ಗೆ ಚಾಲನೆ

Update: 2019-11-15 06:04 GMT

ಮಂಗಳೂರು : ಸಹ್ಯಾದ್ರಿ ಇಂಜಿನೀಯರಿಂಗ್‍ ಕಾಲೇಜ್ ಪ್ರೊಫೆಸರ್ ಹಾಗೂ ಪೊಲೀಸ್, ನ್ಯಾಯಾಧಿಶರುಗಳಿಗೆ ಸೈಬರ್ ಸೆಕ್ಯುರಿಟಿ ಟ್ರೈನರ್ ಡಾ. ಅನಂತ್ ಪ್ರಭು. ಜಿ. ರಾಯಚೂರಿನ ಎಸ್‍ಪಿ ಡಾ. ವೇದಮೂರ್ತಿ ಅವರೊಂದಿಗೆ ಸಂತ ಆಗ್ನೆಸ್ ಅನುದಾನಿತ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ಗಳನ್ನು ವಿತರಿಸಿ, ವಾಟರ್ ಬೆಲ್ ಗೆ ಚಾಲನೆ ನೀಡಿದರು.

ಇತ್ತೀಚೆಗೆ ಶಾಲಾ ಮಕ್ಕಳು ಕಡ್ಡಾಯವಾಗಿ ಪ್ರತಿ ಮೂರು ಗಂಟೆಗಳಿಗೊಮ್ಮೆ ನೀರು ಕುಡಿಯುವಂತೆ ಮಾಡುವ ಸಲುವಾಗಿ ಶಾಲೆಯೊಂದರಲ್ಲಿ 'ವಾಟರ್ ಬೆಲ್' ಬಾರಿಸಲಾಗುತ್ತದೆ ಎಂಬ ಕುರಿತಾದ ಫೇಸ್ ಬುಕ್ ಪೋಸ್ಟ್ ಒಂದನ್ನು ಅವರು ಗಮನಿಸಿದ್ದರು. ಈ ನಿಟ್ಟಿನಲ್ಲಿ ಸಂತ ಆಗ್ನೆಸ್ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ವಾಟರ್ ಬೆಲ್ ಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅನಂತ್ ಪ್ರಭು ಅವರು, ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದರೆ ಮಲಬದ್ಧತೆ, ಉದಾಸೀನತೆ, ಚರ್ಮ ಸುಕ್ಕುಗಟ್ಟುವಿಕೆ, ಏಕಾಗ್ರತೆ ಸಾಧ್ಯವಾಗದೇ ಇರುವುದು, ಸ್ನಾಯುಗಳಲ್ಲಿ ಸೆಳೆತ, ಹೈಪೋಥರ್ಮಿಯಾ ಮುಂತಾದ ಸಮಸ್ಯೆಗಳು ಕಾಡಬಹುದು. ಮುಖ್ಯವಾಗಿ ಬೆಳಗ್ಗೆ ಬಹಳ ಬೇಗನೇ ಮನೆ ಬಿಟ್ಟು ಸಂಜೆ ಶಾಲೆ ಮುಗಿಸಿ ನಂತರ ಕೋಚಿಂಗ್ ಕ್ಲಾಸಿಗೆ ತೆರಳಿ ತಡವಾಗಿ ಮನೆಗೆ ಮರಳುವ ಈಗಿನ ಮಕ್ಕಳು ದೇಹಕ್ಕೆ ಸಾಕಷ್ಟು ನೀರು ಕುಡಿಯುವುದಿಲ್ಲ. ತಮ್ಮೊಂದಿಗೆ ನೀರಿನ ಬಾಟಲಿ ಕೊಂಡು ಹೋಗುವ ಅಭ್ಯಾಸವೇ ಇಲ್ಲದ ಕೆಲವರಿದ್ದರೆ ಇನ್ನು ನೀರಿನ ಬಾಟಲಿ ಕೊಂಡು ಹೋದ ಕೆಲವರು ನೀರನ್ನು ಕುಡಿಯದೆ ಅದನ್ನು ಹಾಗೆಯೇ ವಾಪಸ್ ತರುವುದಿದೆ ಎಂದು ಹೇಳಿದರು.

ಶಾಲೆಯ ವೇಳಾಪಟ್ಟಿಯಲ್ಲಿ ವಾಟರ್ ಬೆಲ್ ಗೆ ಕಾಲಾವಕಾಶ ಕಲ್ಪಿಸುವಂತೆ ಅವರು ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜ್ಯೋತ್ಸ್ನಾ ಅವರಿಗೆ ಮನವಿ ಮಾಡಿದ್ದು, ಅದಕ್ಕೆ ಮುಖ್ಯೋಪಾಧ್ಯಾಯಿನಿ ಒಪ್ಪಿಗೆ ಸೂಚಿಸಿದ್ದಾರೆ.  ಈ ಮೂಲಕ ಸಂತ ಆಗ್ನೆಸ್ ಅನುದಾನಿತ ಕನ್ನಡ ಮಾಧ್ಯಮ ಶಾಲೆ ವಾಟರ್ ಬೆಲ್ ಪರಿಕಲ್ಪನೆಯನ್ನು ಅಳವಡಿಸಿದ ಮಂಗಳೂರಿನ ಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಂತರ ಮಾತನಾಡಿದ ಡಾ. ವೇದಮೂರ್ತಿ, ವಿದ್ಯಾರ್ಥಿಯೊಬ್ಬ ಯಶಸ್ಸು ಸಾಧಿಸಲು  ಉತ್ತಮ ಶಿಕ್ಷಣ, ಜತೆಗೆ ಕಲಿಕೆಗೆ ಪೂರಕ ವಾತಾವರಣ ಹಾಗೂ ಪೌಷ್ಠಿಕ ಆಹಾರ ಅತ್ಯಗತ್ಯ. ಆದರೆ ಇದೇ ಸಮಯ ಒಂದು ಸರಳ ವಿಷಯವನ್ನು ಹಲವರು ಮರೆತು ಬಿಡುತ್ತಾರೆ. ಸಾಕಷ್ಟು ನೀರು ಕುಡಿಯುವುದರಿಂದ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಉತ್ಸಾಹದಿಂದ ಕಲಿಯಬಹುದು. ಸಾಕಷ್ಟು ನೀರು ಕುಡಿಯುವುದರಿಂದ ಮೆದುಳಿನ ಕಾರ್ಯಕ್ಷಮತೆ ಶೇ. 14ರಷ್ಟು ಹೆಚ್ಚು ಸುಧಾರಿಸುತ್ತದೆ. ದೀರ್ಘಾವಧಿ ದೇಹಕ್ಕೆ ನೀರು ದೊರೆಯದೇ ಇದ್ದಾಗ ಮೆದುಳಿನ ಜೀವಕೋಶಗಳು ತಮ್ಮ ಕಾರ್ಯಕ್ಷಮತೆ ಕಳೆದುಕೊಳ್ಳುತ್ತವೆ ಹಾಗೂ ಗಮನ ಕೇಂದ್ರೀಕರಿಸಲು ಮತ್ತು ನಮ್ಮ ಕೆಲಸ ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಸ್ಯೆಯಾಗುತ್ತದೆ ಎಂದು ವಿವರಿಸಿದರು.

ಈ ಸಂದರ್ಭ  ರಾಜೇಶ್ ರಾಮ್, ವೈಕುಂಠ ಪ್ರಭು ಹಾಗೂ ಗಣೇಶ್ ಮುಲ್ಕಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜ್ಯೋತ್ಸ್ನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News